ಮೀರತ್: ಉತ್ತರಪ್ರದೇಶದ ಮೀರತ್‌ನಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಶೇಕಡಾ 93.5ರಷ್ಟು ಮಾರ್ಕ್ಸ್ ಬಂದಿರೋದನ್ನು ನೋಡಿಯೇ ಮೂರ್ಛೆ ಹೋಗಿ ಬಿದ್ದಿರುವ ಘಟನೆ ನಡೆದಿದೆ.
ಹೌದು! 10ನೇ ತರಗತಿಯ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಟರ್ನಿಂಗ್ ಪಾಯಿಂಟ್. ಈ ಪರೀಕ್ಷೆಯಲ್ಲಿ ಡಿಸ್ಟಿಂಗ್ಷನ್‌ನಲ್ಲಿ ಪಾಸ್ ಆಗಬೇಕು ಅನ್ನೋದು ಎಷ್ಟೋ ಮಕ್ಕಳ ಕನಸು. ಅದಕ್ಕಾಗಿ ಕಷ್ಟ ಪಟ್ಟು ಪರೀಕ್ಷೆ ಬರೆದಿರುತ್ತಾರೆ. ಆದರೆ ಫಲಿತಾಂಶ ಬಂದಾಗ ಇನ್ನೂ ಜಾಸ್ತಿ ಮಾರ್ಕ್ಸ್ ಬರಬೇಕಿತ್ತು ಅನ್ನೋರೆ ಹೆಚ್ಚು.
ಆದರೆ, ಮೀರತ್ ವಿದ್ಯಾರ್ಥಿ ಅಂಶುಲ್ ಕುಮಾರ್ ಅಂಕಗಳನ್ನು ನೋಡಿ ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. 16 ವರ್ಷದ ಅಂಶುಲ್ ಮೀರತ್‌ನ ಮೋದಿಪುರಂನಲ್ಲಿರುವ ಮಹರ್ಷಿ ದಯಾನಂದ ಇಂಟರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ.
10ನೇ ತರಗತಿ ಪರೀಕ್ಷೆಯಲ್ಲಿ ಡಿಸ್ಟಿಂಗ್ಷನ್‌ನಲ್ಲಿ ಪಾಸ್ ಆದ ಮಾರ್ಕ್ಸ್ ನೋಡಿಯೇ ಸಖತ್ ಖುಷಿಯಾಗಿದೆ. ಅದೇ ಸಂತೋಷದಲ್ಲಿ ಜಂಪ್ ಮಾಡಿ ಕುಣಿದು ಕುಪ್ಪಳಿಸಿದ್ದಾನೆ. ಅಂಶುಲ್ ಕುಮಾರ್‌ಗೆ ತಾನು ಶೇ.90ಕ್ಕಿಂತ ಹೆಚ್ಚು ಮಾರ್ಕ್ಸ್‌ನಲ್ಲಿ ಪಾಸ್ ಆಗುವ ನಿರೀಕ್ಷೆಯೇ ಇರಲಿಲ್ಲ. ತನ್ನ ನಿರೀಕ್ಷೆಗೂ ಮೀರಿದ ಅಂಕ ಬಂದಿದ್ದಕ್ಕೆ ಅದೇ ಖುಷಿಯಲ್ಲಿ ಮೂರ್ಛೆ ಹೋಗಿದ್ದಾನೆ.
ಮೂರ್ಛೆ ಹೋದ ಅಂಶುಲ್ ಕುಮಾರ್ ಅನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಇದುವರೆಗೂ ವಿದ್ಯಾರ್ಥಿಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ.
ಅಂಶುಲ್ ಕುಮಾರ್ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕುಟುಂಬಸ್ಥರು, ಸ್ನೇಹಿತರು ಚೇತರಿಸಿಕೊಳ್ಳಲು ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನು 10ನೇ ತರಗತಿ ವಿದ್ಯಾರ್ಥಿ ರಿಸಲ್ಟ್ ನೋಡಿ ಮೂರ್ಛೆ ಹೋದ ಸುದ್ದಿ ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.