ಕಾರು-ಲಾರಿ ನಡುವೆ ಭೀಕರ ಅಪಘಾತ- ಒಂದೇ ಕುಟುಂಬದ ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ
ವಿಜಯಪುರ: ಕಾರು ಮತ್ತು ಲಾರಿ ನಡುವೆ ಸಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಸಾವನ್ನಪ್ಪಿದ್ದು ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ನಡೆದಿದೆ.
ಕಾರು-ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದ ಬ್ಯಾಂಕ್ ಉದ್ಯೋಗಿ ಅರ್ಜುನ್ ಹಾಗೂ ಅವರ ಮಗ ಮೇಘರಾಜ, ಮಾವ ರವಿನಾಥ್, ಅತ್ತೆ ಸಾವನ್ನಪ್ಪಿದ್ದಾರೆ. ಮತ್ತೋರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಬಾಲಕಿಯನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿ ಒಟ್ಟು ಏಳು ಜನರಿದ್ದರು. ಅವರಲ್ಲಿ ಅರ್ಜುನ್ ಅವರ ಹೆಂಡತಿ, ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದೆ. ಅರ್ಜುನ್ ಅವರಿಗೆ ರವಿನಾಥ್ ಮಗಳು ಜಯಶ್ರೀಯನ್ನು ಮದುವೆ ಮಾಡಿಕೊಟ್ಟಿದ್ದರು. ಅರ್ಜುನ್ ಅವರಿಗೆ ಮೂವರು ಮಕ್ಕಳಿದ್ದು, ಅವರಲ್ಲಿ ಮೇಘರಾಜ ಮತ್ತ ಅಪ್ಪ ಮೃತಪಟ್ಟಿದ್ದಾರೆ.
6 ವರ್ಷದ ನಯನಾ ಸ್ಥಿತಿ ಗಂಭೀರವಾಗಿದ್ದು, 13 ವರ್ಷದ ಮತ್ತೊಬ್ಬ ಮಗ ಪ್ರೇಮಸಿಂಗ್ಗೂ ಗಾಯವಾಗಿದೆ. ಇವರು ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬರಟಗಿ ತಾಂಡಾದ ನಿವಾಸಿಗಳು. ಮೃತ ರವಿನಾಥ ಸುನಿಲಾಲ್ ಪತ್ತಾರ (68 ), ಪುಷ್ಪಾ ರವಿನಾಥ ಪತ್ತಾರ ( 59) ಇಬ್ಬರು ಗಂಡ-ಹೆಂಡತಿ. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದ ನಿವಾಸಿಗಳು.
33 ವರ್ಷದ ಜಯಶ್ರೀ ಅರ್ಜುನ ರಜಪೂತ, 6 ವರ್ಷದ ನಯಾರಾ ಅರ್ಜುನ ರಜಪೂತ, 13 ವರ್ಷದ ಪ್ರೇಮಸಿಂಗ್ ಅರ್ಜುನ ರಜಪೂತಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಪುರದಿಂದ ಮಹಾಲಿಂಗಪುರಕ್ಕೆ ಮನೆ ಸ್ಥಳಾಂತರಿಸಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಬ್ಯಾಂಕ್ ಉದ್ಯೋಗಿಯಾಗಿದ್ದ ಅರ್ಜುನ್ ಸಿಂಗ್ಗೆ ಮಹಾಲಿಂಗಪುರದಿಂದ ವಿಜಯಪುರಕ್ಕೆ ವರ್ಗಾವಣೆ ಆಗಿತ್ತು. ಮನೆ ಸ್ಥಳಾಂತರಿಸಲು ವಿಜಯಪುರದಿಂದ ಜಮಖಂಡಿ ಮಾರ್ಗವಾಗಿ ಮಹಾಲಿಂಗಪುರಕ್ಕೆ ತೆರಳುತ್ತಿದ್ದರು. (KA 28 D 1021) ಕಾರಿನಲ್ಲಿ ಏಳು ಜನ ತೆರಳುತ್ತಿದ್ದರು. ಜಮಖಂಡಿಯಿಂದ ಸಿಮೆಂಟ್ ಲೋಡ್ ಇದ್ದ (KA 16 B 6472) ಲಾರಿ ವಿಜಯಪುರದತ್ತ ಬರುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.