ಟಿಕೆಟ್ ತೆಗೆದುಕೊಳ್ಳಿ ಎಂದ ನಿರ್ವಾಹಕಿಯ ಕೆನ್ನೆ ಪರಚಿ ರಕ್ತ ಹೆಪ್ಪುಗಟ್ಟಿಸಿದ ಮಹಿಳೆ
ಬೆಂಗಳೂರು: ಟಿಕೆಟ್ ಪಡೆಯದೆ ಫೋನ್‌ನಲ್ಲಿ ಮಾತನಾಡಿಕೊಂಡು ಕುಳಿತಿದ್ದು ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬಳು ಟಿಕೆಟ್ ತೆಗೆದುಕೊ ಎಂದು ಹೇಳಿದ ಬಿಎಂಟಿಸಿ ಬಸ್‌ನ ಮಹಿಳಾ ಕಂಡಕ್ಟರ್ ಮುಖ ಪರಚುವ ಮೂಲಕ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿದ್ದು, ಖಾಸಗಿ ಕಂಪನಿಯ ಉದ್ಯೋಗಿ ಮೋನಿಶಾ (30) ಎಂಬಾಕೆಯೇ ಬಿಎಂಟಿಸಿ ಕಂಡಕ್ಟರ್ ಸುಕನ್ಯಾ ಎಂಬುವವರ ಮೇಲೆ ಹಲ್ಲೆ ಮಾಡಿರುವ ಆರೋಪಿ.
ಮತ್ತಿಕೆರೆ ಬಜಾಜ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮೋನಿಶಾ ಬೆಳಗ್ಗೆ 9:45ಕ್ಕೆ ಬಿಎಂಟಿಸಿ ಬಸ್ ಏರಿದ್ದಾಳೆ. ಈ ವೇಳೆ ಕಂಡಕ್ಟರ್ ಸುಕನ್ಯಾ ಟಿಕೆಟ್ ಕೊಡುವ ಮುನ್ನ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮೋನಿಶಾ ತನ್ನ ಉಗುರುಗಳಿಂದ ಸುಕನ್ಯಾ ಅವರ ಮುಖವನ್ನು ಪರಚಿದ್ದಾಳೆ.
ಇದರಿಂದ ನಿರ್ವಾಹಕಿಯ ಕೆನ್ನೆಗಳು ರಕ್ತದಿಂದ ಹೆಪ್ಪುಗಟ್ಟಿವೆ. ಈ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರು ಮೋನಿಶಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೋನಿಶಾ ಕೇಳಿದ ಪ್ರಯಾಣಿಕರ ವಿರುದ್ಧವು ಕಿಡಿಕಾರಿದ್ದಾರೆ ಎಂದು ತಿಳಿಸಿದು ಬಂದಿದೆ.
ನಿರ್ವಾಹಕಿಯ ಮೇಲೆ ಹಲ್ಲೆ ಮಾಡುತ್ತಿದ್ದಾಗ ಪ್ರಯಾಣಿಕರು ಬಿಡಿಸಲು ಮುಂದಾದರೂ ಸಾಧ್ಯವಾಗಿಲ್ಲ. ಆದರೆ ನಿರ್ವಾಹಕಿ ಸುಕನ್ಯಾ ಅವರ ಕೆನ್ನೆಗೆ ಪರಚಿ ಗಾಯಗೊಳಿಸಿದ ಬಳಿಕ ಮೊದಲು ಕಂಡಕ್ಟರೇ ಹೊಡೆದಿದ್ದು, ಆಕಸ್ಮಿಕವಾಗಿ ಬೆರಳು ಅವರ ಮುಖಕ್ಕೆ ತಾಗಿದೆ ಅಷ್ಟೇ ಎಂದು ಮೋನಿಶಾ ಹೇಳಿದ್ದಾಳೆ.
ಈ ವಿಡಿಯೋವನ್ನು ಬಸ್‌ನಲ್ಲಿದ್ದವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಿದ ಕಾರಣಕ್ಕೆ ಕಂಡಕ್ಟರ್ ಸುಕನ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.