ಕೆ.ಆರ್.ಪೇಟೆ: ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬಿದ್ದಿದ್ದ ಬೆಂಕಿ ಆರಿಸಲು ಹೋಗಿ ಯುವಕನೊಬ್ಬ ಸಜೀವ ದಹನಗೊಂಡಿರುವ ಘಟನೆ ಕತ್ತರಘಟ್ಟ ಗ್ರಾಮದಲ್ಲಿ ನಡೆದಿದೆ.
ಕತ್ತರಘಟ್ಟ ಗ್ರಾಮದ ಸಿದ್ದಯ್ಯ ಎಂಬುವರ ಮಗ ದಲಿತ ಯುವ ರೈತ ಜಯಕುಮಾರ್ ಜೀವಂತ ಸುಟ್ಟು ಕರಕಲಾದ ದುರ್ದೈವಿಯಾಗಿದ್ದಾರೆ.
ಸಾವಿರಾರು ರೂಪಾಯಿ ಬೆಲೆ ಬಾಳುವ ಹುಲ್ಲಿನ ಮೆದೆ ಹಾಳಾಗುತ್ತಿದೆಯಲ್ಲ ಎಂದು ಅದನ್ನು ನಂದಿಸಲು ಮುಂದೆ ಹೋದಾಗ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಜಯಕುಮಾರ್ ಸಜೀವ ದಹನಗೊಂಡಿದ್ದಾರೆ.
ಇನ್ನು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿದ ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರಾದರೂ ಅಷ್ಟರಲ್ಲಿ ಹುಲ್ಲಿನ ಮೆದೆ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿತ್ತು.
ಇತ್ತ ಜಯಕುಮಾರ್ ಅವರ ಮೃತದೇಹ ಕೂಡ ಹುಲ್ಲಿನ ಮೆದೆಯ ಬಳಿಯೇ ಬಿದ್ದಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಆದರೆ, ಇದು ಬೆಂಕಿ ನಂದಿಸಲು ಹೋಗಿ ಯುವಕ ಸಜೀವ ದಹನಗೊಂಡಿದ್ದಾನೋ ಇಲ್ಲ ಬೇರೆ ಏನಾದರು ಹೆಚ್ಚುಕಮ್ಮಿ ಆಗಿದೆಯೋ ಎಂಬ ಅನುಮಾನ ಕೂಡ ಮೂಡುತ್ತಿದ್ದು, ಈ ಬಗ್ಗೆ ಪೊಲೀಸರ ತನಿಖೆಯಿಂದ ಸತ್ಯ ತಿಳಿಯಬೇಕಿದೆ.

Related









