ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರವು ʻನಮ್ಮ ಕ್ಲಿನಿಕ್ʼ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದು, ದೆಹಲಿಯ ಮೊಹಲ್ಲಾ ಕ್ಲಿನಿಕ್‌ನಂತೆ ಪಾರದರ್ಶಕ ಹಾಗೂ ವ್ಯವಸ್ಥಿತ ಆರೋಗ್ಯ ಸೇವೆ ಒದಗಿಸಲು ಅಗತ್ಯ ಸಲಹೆ ನೀಡಲು ಆಮ್ ಆದ್ಮಿ ಪಾರ್ಟಿ ಸಿದ್ಧವಿದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ರಾಜ್ಯ ಬಿಜೆಪಿ ಸರ್ಕಾರವು ನಮ್ಮ ಕ್ಲಿನಿಕ್ ನಿರ್ಮಿಸುತ್ತಿದೆ. ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿರುವ ವಿಧಾನವನ್ನು ಗಮನಿಸಿದರೆ ಬ್ರಹ್ಮಾಂಡ ಭ್ರಷ್ಟಾಚಾರವಾಗುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಇನ್ನು ದೆಹಲಿಯಲ್ಲಿ ಕೇವಲ 20 ಲಕ್ಷ ರೂ.ಗಳಲ್ಲಿ ವ್ಯವಸ್ಥಿತವಾಗಿ ನಿರ್ಮಾಣವಾದ ಮೊಹಲ್ಲಾ ಕ್ಲಿನಿಕ್‌ಗಳನ್ನು ಕರ್ನಾಟಕದಲ್ಲಿ ಬೇರೆ ಹೆಸರಿನಲ್ಲಿ ನಿರ್ಮಿಸಲು ಬಿಜೆಪಿ ಸರ್ಕಾರವು ತಲಾ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ದೂರಿದರು.
ಭ್ರಷ್ಟ ಬಿಜೆಪಿ ಸರ್ಕಾರವು ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಒದಗಿಸುವ ಯಾವುದೇ ಸದುದ್ದೇಶವಿಲ್ಲದೇ, ಕೇವಲ ಅಕ್ರಮಕ್ಕಾಗಿ ಹಾಗೂ ಎಲೆಕ್ಷನ್ ಗಿಮಿಕ್‌ಗಾಗಿ ನಮ್ಮ ಕ್ಲಿನಿಕ್‌ಗಳನ್ನು ನಿರ್ಮಿಸುತ್ತಿದೆ. ಇಂದಿರಾ ಕ್ಯಾಂಟೀನ್‌ನಂತೆ ಇದು ಕೂಡ ಪಾರದರ್ಶಕತೆಗೆ ವಿರುದ್ಧವಾಗಿ ಸಾಗುತ್ತಿದೆ ಎಂದು ಹೇಳಿದರು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿದೆ. ಕೆಲವು ತಿಂಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು 100 ಮೊಹಲ್ಲಾ ಕ್ಲಿನಿಕ್‌ಗಳನ್ನು ಲೋಕಾರ್ಪಾಣೆ ಮಾಡಿದೆ. ಅವುಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆಗಳು ಸೇರಿದಂತೆ 200ಕ್ಕೂ ಹೆಚ್ಚು ಸೇವೆಗಳು ಉಚಿತವಾಗಿ ದೊರೆಯುತ್ತಿದೆ ಎಂದು ವಿವರಿಸಿದರು.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರ್ಕಾರ ಬಯಸಿದರೆ, ಕರ್ನಾಟಕದಲ್ಲೂ ಅಂತಹ ಕ್ಲಿನಿಕ್‌ಗಳನ್ನು ಉತ್ತಮ ಗುಣಮಟ್ಟದಲ್ಲಿ, ಸಂಪೂರ್ಣ ಪಾರದರ್ಶಕವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ತೆರೆಯಲು ಆಮ್ ಆದ್ಮಿ ಪಾರ್ಟಿಯು ರೂಪುರೇಷೆ ತಯಾರಿಸಿಕೊಡಲಿದೆ ಎಂದು ಜಗದೀಶ್ ವಿ ಸದಂ ಹೇಳಿದರು.