ಬೆಳಗಾವಿ: ತಾಲೂಕಿನ ನಾವಗೆ ಗ್ರಾಮದ ಕ್ರಾಸ್‌ನ ಸಮೀಪದ ಸ್ನೇಹಂ ಟೇಪಿಂಗ್ ಅಂಡ್ ಸಲ್ಯೂಶನ್ ಟಿಕ್ಸೋ ಟೇಪ್ (ಅಂಟು ಪಟ್ಟಿ) ತಯಾರಿಸುವ ಕಾರ್ಖಾನೆಗೆ ಮಂಗಳವಾರ ರಾತ್ರಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡ ಒಬ್ಬ ಯುವಕ ಸುಟ್ಟು ಕರಕಲಾಗಿದ್ದು ಮೂವರ ಸ್ಥಿತಿ ಚಿಂತಾಜನಕವಾಗಿದೆ.
ತಾಲೂಕಿನ ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ(19) ಎಂಬ ಯುವಕ ಒಳಗೆ ಸಿಕ್ಕಿ ಹಾಕಿಕೊಂಡಿದ್ದನು. ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ರಾತ್ರಿಯಿಡೀ ಬೆಂಕಿ ಹೊತ್ತು ಕೊಂಡಿತ್ತು. ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಜೆಸಿಬಿ ಮೂಲಕ ಗೋಡೆ ಒಡೆದು ಒಳ ನುಗ್ಗಿ ಮೃತದೇಹ ಹೊರ ತೆಗೆದಿದ್ದಾರೆ.
ಯುವಕ ಸಂಪೂರ್ಣ ಸುಟ್ಟು ರಕಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತ ಯುವಕನ ಕುಟುಂಬಸ್ಥರ ದುಃಖ ಮುಗಿಲು ಮುಟ್ಟುವಂತಿತ್ತು.
ತಾಲೂಕಿನ ಬಜಾರವಾಡಿಯ ರಣಜೀತ ದಶರಥ ಪಾಟೀಲ (39), ಜುನೆ ಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಳಗುಡೆ(35), ಕವಳೆವಾಡಿಯ ಮಾರುತಿ ನಾರಾಯಣ ಕವಳೇಕರ (32) ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಲಕರಣೆಗಳು ಇದ್ದಿದ್ದರಿಂದ ಬೃಹತ್ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿದೆ. ಸುಮಾರು 70ಕ್ಕೂ ಹೆಚ್ಚು ಜನ ಒಳಗೆ ಇದ್ದರು. ಪ್ರತಿ ಶಿಪ್ಟ್ ನಲ್ಲಿ 70-80 ನೌಕರರು ಕೆಲಸ ಮಾಡುತ್ತಿದ್ದರು. ಕಾರ್ಖಾನೆಯ ಲಿಪ್ಟ್ ಬಳಿ 8-10 ಕಾರ್ಮಿಕರು ಇದ್ದರು. ಕೂಡಲೇ ಮೂವರನ್ನು ಕಿಟಕಿ ಒಡೆದು ಹೊರಗೆ ತೆಗೆಯಲಾಗಿದ್ದು, ಎಲ್ಲರೂ ಹೊರಗೆ ಬಂದಿದ್ದರು.
ಆದರೆ, ಯುವಕ ಯಲ್ಲಪ್ಪ ಮಾತ್ರ ಒಳಗೆ ಸಿಕ್ಕಿ ಹಾಕಿಕೊಂಡಿದ್ದನು. ಹೊರಗೆ ಬರಲು ಆಗದೇ ಒದ್ದಾಡಿ ಅಲ್ಲಿಯೇ ಸಜೀವ ದಹನವಾಗಿದ್ದಾನೆ. ಇನ್ನು ಬೆಂಕಿ ಆವರಿಸಿಕೊಂಡಾಗ ಹೊರಗೆ ಬರಲು ಅನೇಕರು ಪರದಾಡುತ್ತಿದ್ದರು. ಬೆಂಕಿ ಕೆನ್ನಾಲಗೆ ಎಷ್ಟು ಭೀಕರವಾಗಿತ್ತು ಎಂದರೆ ಅಗ್ನಿಶಾಮಕ ವಾಹನಗಳು ಹತ್ತಿರ ಹೋಗಲೂ ಆಗುತ್ತಿರಲಿಲ್ಲ.
ಪೊಲೀಸರು, ಗ್ರಾಮಸ್ಥರು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಬೆಂಕಿಯ ಕೆನ್ನಾಲಿಗೆ ಆವರಿಸಿ ಇಡೀ ಕಾರ್ಖಾನೆಯನ್ನು ಸುಟ್ಟು ಭಸ್ಮ ಮಾಡಿದೆ. ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ನಾಶವಾಗಿವೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂ ಗ್, ಡಿಸಿಪಿ ರೋಹನ್ ಜಗದೀಶ, ಎಸಿಪಿ ಸೇರಿದಂತೆ ಪೊಲೀಸರು ಸ್ಥಳದಲ್ಲೇ ಇದ್ದಾರೆ.
ಅವಘಡ ಸಂಬಂಧ ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.