ಬೆಂಗಳೂರು: ಪ್ರೊತ್ಸಾಹಧನ ಪಡೆಯುವ ಅಸೆಗೆ ಬಿದ್ದು ಶಕ್ತಿ ಯೋಜನೆಯ ಉಚಿತ ಟಿಕೆಟ್‌ಗಳನ್ನು ‘ಅನಗತ್ಯವಾಗಿ’ ಹರಿದು ಎಸೆದಿರುವ ಆರೋಪಡಿ ಬಿಎಂಟಿಸಿ ಡ್ರೈವರ್ ಕಂ ಕಂಡಕ್ಟರ್ ರೊಬ್ಬರನ್ನು ಅಮಾನತು ಮಾಡಲಾಗಿದೆ.
ಬಿಎಂಟಿಸಿ 17ನೇ ಘಟಕದ ಚಾಲಕ ಕಂ ನಿರ್ವಾಹಕ ಪ್ರಕಾಶ್ ಅರ್ಜುನ ಕೋಟ್ಯಾಲ ಎಂಬುವರೆ ಅಮಾನತಾಗಿರುವವರು. ಇವರು ಟಿಕೆಟ್ ಹರಿದು ಬಿಸಾಡಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ. ಈ ಆಧಾರದ ಮೆಲೆ ಅಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡಕ್ಟರ್ ಎಲೆಕ್ಟ್ರಿಕ್ ಟಿಕೆಟಿಂಗ್ ಯಂತ್ರದಿಂದ ಶಕ್ತಿ ಯೋಜನೆಯಡಿ ಟಿಕೆಟ್‌ಗಳನ್ನು ಹರಿದು ಹರಿದು, ಕಿಟಕಿಯಿಂದ ಹೊರಗೆ ಎಸೆಯುವುದನ್ನು ಕಾಣಬಹುದು.
ಇವು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುವ ಶೂನ್ಯ ದರದ ಟಿಕೆಟ್‌ಗಳಾಗಿದ್ದು, ಹೀಗೆ ಎಸೆದಿದ್ದಾರೆ ಎಂಬ ಆರೋಪ ಈ ನಿರ್ವಾಹಕನ ಮೇಲಿದೆ.
ಅಲ್ಲದೆ ಮಹಿಳಾ ಪ್ರಯಾಣಿಕರೊಬ್ಬರು ಈ ಕೃತ್ಯವನ್ನು ವಿಡಿಯೋ ಮಾಡಿ ಕಂಡಕ್ಟರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ನೀವು ಈ ಟಿಕೆಟ್‌ಗಳನ್ನು ಏಕೆ ಎಸೆಯುತ್ತಿದ್ದೀರಿ? ನಿಮ್ಮ ಸ್ವಂತ ಹಣದಿಂದ ನೀವು ಅವರಿಗೆ ಪಾವತಿಸುತ್ತೀರಾ?. ನೀವು ನಕಲಿ ಟಿಕೆಟ್‌ಗಳನ್ನು ಮುದ್ರಿಸುತ್ತಿರುವುದರಿಂದ ಸರ್ಕಾರವು (ಶಕ್ತಿ ಯೋಜನೆಯಿಂದಾಗಿ) ನಷ್ಟವನ್ನು ಅನುಭವಿಸುತ್ತದೆ. ಟ್ಯಾಕ್ಸ್ ಕಟ್ಟುವವರು ನಾವೇ ಅಲ್ಲವೇ? ಎಂದು ಮಹಿಳೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಎಂಟಿಸಿಯಿಂದ ಪ್ರೋತ್ಸಾಹಧನ ಪಡೆಯಲು ಕಂಡಕ್ಟರ್‌ಗಳು ಸುಳ್ಳು ಟಿಕೆಟ್‌ಗಳನ್ನು ಮುದ್ರಿಸುತ್ತಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಿಗಮವು ತನ್ನ ಬಸ್ ಸಿಬ್ಬಂದಿಗೆ ಅವರಿಗೆ ನೀಡಿದ್ದ ಗುರಿಗಳನ್ನು ಪೂರೈಸಿದರೆ ಪ್ರೋತ್ಸಾಹಧನ ನೀಡುತ್ತದೆ.
ವಿಡಿಯೋಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ: ವಿಡಿಯೋದಲ್ಲಿರುವ ಸಿಬ್ಬಂದಿ ಪ್ರಕಾಶ್ ಅರ್ಜುನ ಕೋಟ್ಯಾಲ ಆಗಿದ್ದು, ಡಿಪೋ 17, ಮಾರ್ಗ ಸಂಖ್ಯೆ 242 ಬಿ (ಮೆಜೆಸ್ಟಿಕ್-ತಾವರೆಕೆರೆ) ಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೇಂದ್ರ ಕಚೇರಿಗೆ ಕರೆದು ವಿಚಾರಣೆಯ ನಂತರ ಅವರನ್ನು ಅಮಾನತುಗೊಳಿಸಿದೆ ಎಂದು ಹೇಳಿದೆ.
ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಬಸ್ ಸಿಬ್ಬಂದಿ ಯಾವುದೇ ದುರ್ವರ್ತನೆ ತೋರಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ ಎಚ್ಚರಿಕೆ ನೀಡಿದ್ದಾರೆ.