
ಬೆಂಗಳೂರು: ಮಕ್ಕಳು ದೇವರ ಸಮಾನ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಅಂತಹ ದೇವರಿಗೆ ಸಮಸ್ಯೆ ಆದರೆ ಅದನ್ನು ಪರಿಹರಿಸಲು ಎಷ್ಟೋ ಪಾಲಕರು ಪರದಾಡುತ್ತಾರೆ. ಅಲ್ಲದೆ ನಮ್ಮ ಕಂದಮ್ಮ ಆರೋಗ್ಯವಾಗಿರಬೇಕು ಎಂದು ಪ್ರಾರ್ಥಿಸುತ್ತಿರುತ್ತಾರೆ.
ಆ ದೇವರಲ್ಲಿ ಪ್ರಾರ್ಥನೆ ಮಾಡಿದ್ದರ ಫಲವಾಗಿ ಯಾರೋ ಒಬ್ಬರ ರೂಪದಲ್ಲಿ ದೇವರು ಬಂದು ಸಹಾಯ ಮಾಡುತ್ತಾನೆ. ಅಂಥ ಸಹಾಯ ಈಗ ಧ್ರುವ ಸರ್ಜಾ ಮಾಡುವ ಮೂಲಕ ಮಗುವಿನ ಪಾಲಕರಿಗೆ ದೈವವಾಗಿದ್ದಾರೆ.
ಹೌದು! ನಟ ಧ್ರುವ ಸರ್ಜಾ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಇದೀಗ ಪುಟ್ಟ ಮಗುವಿನ ಸಂಕಷ್ಟಕ್ಕೆ ಧ್ರುವ ಸ್ಪಂದಿಸಿದ್ದು, ಕಣ್ಣಿನಲ್ಲಿ ಪೊರೆ ಬೆಳೆದ ಪುಟ್ಟ ಕಂದಮ್ಮನ ಟ್ರೀಟ್‌ಮೆಂಟ್‌ಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಚಿರಂಜೀವಿ ಎಂಬ ಪುಟ್ಟ ಮಗುವಿನ ಎರಡು ಕಣ್ಣಿನಲ್ಲೂ ಪೊರೆ ಬೆಳೆದಿದ್ದು, ಅದರ ಚಿಕಿತ್ಸೆಗಾಗಿ ಧ್ರುವ ಸಹಕರಿಸಿದ್ದಾರೆ. ಮಂಜುನಾಥ ನೇತ್ರಾಲಯದ ವೈದ್ಯರ ಬಳಿ ಈ ಬಗ್ಗೆ ಮಾತನಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗಾಗಿ ಪುಟ್ಟ ಮಗುವಿಗೆ ಯಶಸ್ವಿಗಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಈ ಮೂಲಕ ಗಾರೆ ಕೆಲಸ ಮಾಡುವ ತಂದೆಯ ಬೆನ್ನಿಗೆ ನಿಂತ ಧ್ರುವ ಅವರ ಪಾಲಿನ ದೇವರಾಗಿದ್ದಾರೆ. ಅಲ್ಲದೆ ಈ ರೀತಿ ಸಮಾಜಮುಖಿ ಕೆಲಸಗಳು ಸರ್ ಅವರಿಂದ ಹೆಚ್ಚೆಚ್ಚು ಆಗಲಿ ಅದಕ್ಕೆ ಆ ದೇವರು ಇವರಿಗೆ ಶಕ್ತಿ ಕೊಡಲಿದೆ ಎಂದು ಮಗುವಿನ ತಂದೆ ಪ್ರಾರ್ಥಿಸಿದರು.
ಅಂದಹಾಗೆ, ನಿನ್ನೆ (ಮಾ.31) ಸುದೀಪ್ ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮ ಕೀರ್ತನಾ ಚಿಕಿತ್ಸೆಗೆ ಸಹಾಯ ಮಾಡಿದ್ದರು. ಇದರ ಚಿಕಿತ್ಸೆಗೆ 16 ಕೋಟಿ ರೂ. ಬೇಕಿರೋದ್ರಿಂದ ಸುದೀಪ್, ನಾನು ನನ್ನ ಕೈಲಾದ ಸಹಾಯ ಮಾಡಿದ್ದೀನಿ, ನೀವೆಲ್ಲರೂ ಕೈಜೋಡಿಸಿ ಎಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ಸುದೀಪ್ ಅವರ ಮನವಿ ಬೆನ್ನಲ್ಲೇ ಧ್ರುವ ಸರ್ಜಾ ಕೂಡ ಮತ್ತೊಂದು ಪುಟ್ಟ ಮಗುವಿನ ಬಾಳಿಗೆ ಬೆಳಕಾಗಿರೋದನ್ನು ನೋಡಿ ಫ್ಯಾನ್ಸ್ ಶ್ಲಾಘಿಸಿದ್ದಾರೆ. ಅಲ್ಲದೆ ಇಂಥ ನಾಯಕರು ಸಿನಿಮಾ ರಂಗದಲ್ಲಿ ಮಾತ್ರವಲ್ಲ ಎಲ್ಲೆಡೆಯೂ ಇರಬೇಕು. ಈ ರೀತಿ ಸಹಾಯ ಮಾಡುವ ಕೈಗಳು ಇನ್ನಷ್ಟು ಹೆಚ್ಚಾಗಬೇಕು ಎಂದು ಹೇಳುತ್ತಿದ್ದಾರೆ.