ಮಂಡ್ಯ: ಮಹರ್ನವಮಿ ಮುನ್ನಾ ದಿನವಾದ ಶನಿವಾರ ಮಂಡ್ಯ ನಗರ ಹಾಗೂ ಇತರ ತಾಲೂಕು ಕೇಂದ್ರಗಳಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿ ಬಿರುಸಾಗಿತ್ತು. ಮಾರುಕಟ್ಟೆಗಳಲ್ಲಿ ಜನಜಂಗುಳಿಯೇ ನೆರೆದಿತ್ತು. ಹಬ್ಬಕ್ಕೆ ಬೇಕಾದ ಎಡೆಸಾಮಾನು, ಬಟ್ಟೆ, ಹಣ್ಣು, ಹೂವು ಹಾಗೂ ಇತರ ವಸ್ತುಗಳ ಖರೀದಿ ಪ್ರಕ್ರಿಯೆ ಭರ್ಜರಿಯಾಗಿ ನಡೆದಿತ್ತು
ಹೌದು ಬೆಲೆ ಏರಿಕೆಯ ಬಿಸಿಯ ನಡುವೆಯೂ ಪಿತೃಗಳನ್ನು ಆರಾಧಿಸುವ ಮಹರ್ನಮಿ ಹಬ್ಬ (ಮಹಾಲಯ ಅಮಾವಾಸ್ಯೆ) ಆಚರಣೆಗೆ ಜಿಲ್ಲಾದ್ಯಂತ ಬಿರುಸಿನ ತಯಾರಿ ನಡೆಯುತ್ತಿದೆ. ಇನ್ನೊಂದೆಡೆ ಉತ್ತಮ ಮಳೆಯಾಗಿರುವುದರಿಂದ ಸಂಭ್ರಮದಲ್ಲಿರುವ ಗ್ರಾಮೀಣ ಜನರು ಅದ್ದೂರಿಯಾಗಿ ಹಬ್ಬ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ.
ಹಬ್ಬದ ಹಿಂದಿನ ದಿನವೇ ಮಹರ್ನವಮಿಗೆ ಬೇಕಾದ ಬಹುತೇಕ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನತೆ ತೊಡಗಿದ್ದರಿಂದ ನಗರದ ಪೇಟೆಬೀದಿ, ಹಳೇ ಎಂ.ಸಿ.ರಸ್ತೆಯಲ್ಲಿ ಕಿಕ್ಕಿರಿದ ಜನಸಂದಣಿಯಿಂದ ತುಂಬಿ ತುಳುಕುತ್ತಿತ್ತು. ಹೂವು ಮತ್ತು ಹಣ್ಣುಗಳ ವ್ಯಾಪಾರ ಕೂಡ ಬಿರುಸುಗೊಂಡಿತ್ತು.
ಸ್ವರ್ಗಸ್ಥರಾಗಿರುವ ಹಿರಿಯರಿಗೆ ಪಿತೃಪಕ್ಷದ ದಿನದಂದು ಎಡೆ ಇಡುವುದು ವಾಡಿಕೆ. ಮಾಂಸದೂಟದ ಜತೆಗೆ ಎಡೆ ಸಾಮಗ್ರಿನುಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಸಾಮಗ್ರಿನುಗಳನ್ನು ಮಾರುವವರು ಹೆಜ್ಜೆಗೊಬ್ಬರಂತೆ ಅಂಗಡಿ ಹಾಕಿಕೊಂಡಿದ್ದಾರೆ.
ಅರಿಶಿನ-ಕುಂಕುಮ, ಧೂಪ, ಕರ್ಪೂರ, ಗಂಧದ ಪುಡಿ, ಎಲೆ-ಅಡಿಕೆ, ಬಾಚಣಿಗೆ, ವಿಭೂತಿ, ದಾರ, ಬಳೆ ಮುಂತಾದ ವಸ್ತುಗಳನ್ನು ಒಳಗೊಂಡ ಎಡೆ ಸಾಮಗ್ರಿನುಗಳನ್ನು ಮಾರಾಟ ಮಾಡಲಾಗುತ್ತಿದೆ. ಎಡೆ ಸಾಮಗ್ರಿ ಒಂದು ಕಟ್ಟು 20 ರೂ. ಮತ್ತು 30 ರೂ. ದರದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಎಡೆ ಸಾಮಗ್ರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.
ಇನ್ನು ಮಹಾಲಯ ಅಮಾವಾಸ್ಯೆ ಪ್ರಯುಕ್ತ ನಗರ ಸೇರಿ ಜಿಲ್ಲೆಯ ವಿವಿಧೆಡೆ ಪಿತೃಪಕ್ಷ ಇರುವ ಕಾರಣ ಹೂವು-ಹಣ್ಣು, ತರಕಾರಿ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.
ಇತ್ತ ಪಿತೃಪಕ್ಷಕ್ಕೆ ಮಂಡ್ಯ ಜಿಲ್ಲೆಯ ಮಂದಿ ಹೆಚ್ಚಿನ ಆದ್ಯತೆ ಇರುವುದರಿಂದ ಹಬ್ಬದ ಪ್ರಯುಕ್ತ ಬಟ್ಟೆ ಅಂಗಡಿಗಳಲ್ಲಿ ಹೊಸ ಬಟ್ಟೆ ಖರೀದಿಗೆ ಜನ ಮುಗಿಬಿದ್ದಿದ್ದರು. ಹಿರಿಯರಿಗೆ ಎಡೆ ಇಡಲು ಬೇಕಾದ ಬಿಳಿ ವಸ್ತ್ರ, ಟವೆಲ್, ಪಂಚೆ, ಸೀರೆಗಳ ಖರೀದಿಯಲ್ಲಿ ಜನರು ತೊಡಗಿದ್ದರಲ್ಲದೆ, ಹಬ್ಬದ ಸಲುವಾಗಿ ತಾವೂ ಸೇರಿದಂತೆ ಮಕ್ಕಳು ಹೊಸ ಬಟ್ಟೆ ಖರೀದಿಸುತ್ತಿದ್ದದ್ದು ಕಂಡು ಬಂದಿತು.