NEWSನಮ್ಮಜಿಲ್ಲೆನಮ್ಮರಾಜ್ಯ

ಏಷ್ಯಾದಲ್ಲೇ ಮೊದಲ ಸ್ಥಾನಕ್ಕೆ ಕರ್ನಾಟಕ ಒಯ್ಯುವ ಗುರಿ : ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕವನ್ನು ಭವಿಷ್ಯದ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಉತ್ಪಾದನಾ ವಲಯದಲ್ಲಿ ಸಮಾನ ಹಾಗೂ ಸುಸ್ಥಿರ ಬೆಳವಣಿಗೆಯ ಮೂಲಕ ಏಷ್ಯಾದಲ್ಲೇ ಮೊದಲ ಸ್ಥಾನಕ್ಕೆ ಒಯ್ಯುವ ಗುರಿ ನಮ್ಮದಾಗಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯದ ಕೈಗಾರಿಕಾ ವಲಯವು ಶೇ. 9.3 ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ದರವನ್ನು ಶೇ. 15-16 ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಪ್ರತಿವರ್ಷ ಕನಿಷ್ಠ 1.4 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 14 ಲಕ್ಷ ಹೊಸ ಉದ್ಯೋಗಗಳ ಸೃಜನೆಯಾಗುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ಮಾಣಿಕ್​ಷಾ ಪರೇಡ್​ ಮೈದಾನದಲ್ಲಿ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತ್ರಿವಣ ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದರು.

ಕಳೆದ ಎರಡು ತಿಂಗಳಲ್ಲಿ ಫಾಕ್ಸ್‍ಕಾನ್, ಇಂಟರ್‍ನ್ಯಾಷನಲ್ ಬ್ಯಾಟರಿ ಕಂಪೆನಿ, ಟಾಟಾ ಟೆಕ್ನಾಲಜೀಸ್ ಮತ್ತಿತರ ಕಂಪೆನಿಗಳಿಂದ ಗಣನೀಯ ಪ್ರಮಾಣದ ಹೂಡಿಕೆ ಆಕರ್ಷಿಸಲಾಗಿದೆ. ಹೂಡಿಕೆ ಆಕರ್ಷಣೆಯಲ್ಲಿ ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ ಏರೋಸ್ಪೇಸ್ ಮತ್ತು ರಕ್ಷಣೆ, ಆಟೊಮೊಬೈಲ್, ವಿದ್ಯುತ್ ವಾಹನಗಳು (EV), ಇಲೆಕ್ಟ್ರಾನಿಕ್ಸ್ ಮತ್ತು ಉತ್ಪಾದನಾ ವಲಯ, ಸ್ಟಾರ್ಟಪ್‍ಗಳು, ವಿವಿಧ ಸಂಘಟನೆಗಳು, ಮೂಲ ಸೌಕರ್ಯ ಅಭಿವೃದ್ಧಿ ವಲಯದ ಸಂಸ್ಥೆಗಳೊಂದಿಗೆ ನಿರಂತರ ಸಂವಾದ ನಡೆಸುತ್ತಿದ್ದೇವೆ.

ಜಿಡಿಪಿ ವೇಗವರ್ಧನೆಗೆ ಸಂಬಂಧಿಸಿದಂತೆ ಏರೋಸ್ಪೇಸ್ ಮತ್ತು ಡಿಫೆನ್ಸ್, ಎಲೆಕ್ಟ್ರಾನಿಕ್ ಬಿಡಿಭಾಗಗಳು, ಕೋರ್ ಕೈಗಾರಿಕೆಗಳು ಮತ್ತು ವೇರ್ ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನಾವೀನ್ಯತೆಯಲ್ಲಿ ಇದೀಗ ಬೆಳಕು ಕಾಣುತ್ತಿರುವ Future Mobility, Green Hydrogen, Drones, Industrial Robots, Semiconductors ಉತ್ಪಾದನೆ,AR/ VR, Med tech ಮತ್ತು Space tech ಮೊದಲಾದ ಉದ್ಯಮಗಳಿಗೆ ಆದ್ಯತೆ ನೀಡಲಾಗುವುದು.

ಆದ್ಯತೆಯ ಈ ವಲಯಗಳ ಉತ್ತೇಜನದ ಉಪಕ್ರಮಗಳಿಗೆ ಬೆಂಬಲವಾಗಿ ಕೈಗಾರಿಕಾ ನೀತಿಯನ್ನು ಇನ್ನಷ್ಟು ಪ್ರಗತಿಪರವಾಗಿ ರೂಪಿಸಿ ಪುನರ್ ರಚಿಸುವುದು, ವಿಶ್ವ ದರ್ಜೆಯ ಕೈಗಾರಿಕಾ ಮೂಲಸೌಕರ್ಯ, ಡಿಜಿಟಲ್ ಸೇವಾ ಪೂರೈಕೆ, ಅತ್ಯುತ್ತಮ ಹೂಡಿಕೆ ಉತ್ತೇಜನ ಸಂಸ್ಥೆ, ಕರ್ನಾಟಕದಲ್ಲಿ ಭವಿಷ್ಯದ ಉದ್ಯಮಕ್ಕೆ ಸಿದ್ಧವಿರುವ ಪ್ರತಿಭೆಗಳ ಲಭ್ಯತೆ ಮತ್ತು ವಿವಿಧ ಸಂಸ್ಥೆಗಳೊಂದಿಗೆ ಸಹಯೋಗ ಮತ್ತು ಮುಂಗಾಣ್ಕೆಯುಳ್ಳ ನೀತಿಗಳನ್ನು ಅನುಷ್ಠಾನಗೊಳಿಸಲಾಗುವುದು.

ಬೆಂಗಳೂರಿನಿಂದ ಹೊರಗೆ ಹೆಚ್ಚು ಉದ್ಯೋಗಾವಕಾಶ ಸೃಜಿಸುವ ಮೂಲಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮತ್ತು ಸುಸ್ಥಿರ ಬದುಕು ರೂಪಿಸಲು ಸರ್ಕಾರವು ಮಿಲಿಯನ್ ಪ್ಲಸ್ ನಗರಗಳೆಂದು ಗುರುತಿಸಲಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಬಳ್ಳಾರಿ ನಗರಗಳ ಉಪನಗರಗಳಾಗಿ ಕೈಗಾರಿಕಾ ಟೌನ್‍ಶಿಪ್‍ಗಳನ್ನು ಅಭಿವೃದ್ಧಿಪಡಿಸಲಿದೆ. ಕೈಗಾರಿಕೆಗಳ ಸ್ಥಾಪನೆಯನ್ನು ಕೇಂದ್ರವಾಗಿಸಿಕೊಂಡ ಈ ಉಪನಗರಗಳು ಸುಸ್ಥಿರತೆಯನ್ನು ಹೊಂದಿದ್ದು, ನಾಗರಿಕ ಸೌಲಭ್ಯಗಳು, ಶಾಲೆ, ಆರೋಗ್ಯ ಸೇವಾ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಒದಗಿಸಲಾಗುವುದು.

ರಸ್ತೆ, ವಿಮಾನ ನಿಲ್ದಾಣ ಹಾಗೂ ಬಂದರುಗಳ ಅಭಿವೃದ್ಧಿಗೂ ಆಯವ್ಯಯದಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳು ಹಾಗೂ ಪ್ರಗತಿಯಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳು, ಅಂತರರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಪ್ರವಾಸಿ ತಾಣಗಳ ರಸ್ತೆಗಳನ್ನು ಗುರುತಿಸಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ Hybrid Annuity Model ನಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಹುಮನಾಬಾದ್-ಕಲಬುರಗಿ ಮತ್ತು ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ ನಡುವೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಎಕ್ಸಪ್ರೆಸ್-ವೇ ನಿರ್ಮಿಸುವ ಮೂಲಕ ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರು ನಡುವಣ ರಸ್ತೆ ಸಂಪರ್ಕ ಇನ್ನಷ್ಟು ಉತ್ತಮ ಪಡಿಸಲಾಗುವುದು.

ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಹಂಚಿಕೆ ಮಾಡಿರುವ ಪ್ರತಿ ಹನಿ ನೀರನ್ನು ಬಳಸಿಕೊಳ್ಳಲು ನಾವು ತಯಾರಿದ್ದೇವೆ. ಇದಕ್ಕೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಿಸಿ ವಿನಿಯೋಗಿಸುತ್ತೇವೆ. ನಮ್ಮ ಸರ್ಕಾರವು ಪ್ರಾದೇಶಿಕ ಅಸಮಾನತೆ ನಿವಾರಿಸಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ.

ಪ್ರವಾಸೋದ್ಯಮ ಕೂಡ ಆರ್ಥಿಕತೆ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಜನೆಗೆ ಮಹತ್ತರ ಕೊಡುಗೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ನಾಡಿನ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೊಳ್ಳಲು ಒತ್ತು ನೀಡಲಾಗುವುದು. ಆಯವ್ಯಯದಲ್ಲಿ ಘೋಷಿದಂತೆ ಕೃಷಿಯೇತರ ಉದ್ದೇಶಕ್ಕೆ ಜಮೀನಿನ ಬಳಕೆಗೆ ಸ್ವಯಂ ಘೋಷಣೆಯ ಮೂಲಕ ಭೂ-ಪರಿವರ್ತನೆ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಭೂ-ಕಂದಾಯ ಕಾಯ್ದೆಯ ಸೆಕ್ಷನ್-95ಕ್ಕೆ ತಿದ್ದುಪಡಿ ತಂದು ಪ್ರಕ್ರಿಯೆಗಳನ್ನು ಸರಳೀಕರಣ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡುವ, ಸಾಮರಸ್ಯ ಕದಡುವ ಯತ್ನ ಮತ್ತು ‘ಮತೀಯ ಗೂಂಡಾಗಿರಿ ಅಥವಾ ನೈತಿಕ ಪೊಲೀಸ್ ಗಿರಿʼ ಹೆಸರಿನಲ್ಲಿ ನಡೆಯುವ ಅನೈತಿಕ ದಬ್ಬಾಳಿಕೆಯನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ. ಸರ್ಕಾರದ ಪ್ರಧಾನ ಧ್ಯೇಯ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ಅವರ ಆಶಯವನ್ನು ಈಡೇರಿಸುವುದೇ ಆಗಿದೆ. ನಾಡ ಜನರು, ವಿಶೇಷವಾಗಿ ಯುವಜನರು ಇಂತಹ ವಿಚ್ಛಿದ್ರಕಾರಿ ಶಕ್ತಿಗಳ ಪ್ರಚೋದನೆಗೆ ಒಳಗಾಗದೆ ಸಾಮರಸ್ಯ, ಸಹಬಾಳ್ವೆಯ ಮಹತ್ವವನ್ನು ಎತ್ತಿ ಹಿಡಿಯಬೇಕೆಂದು ಮನವಿ ಮಾಡುತ್ತೇನೆ ಎಂದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು