ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಕರೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿ ಬಂದಿದ್ದರಿಂದ ಕೂಡಲೇ ಜಾರಿಗೆ ಬರುವಂತೆ ನಿರ್ವಾಹಕರನ್ನು ಆಮಾನತು ಮಾಡಿ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಇದೇ ಆ.6ರಂದು ಬಿಎಂಟಿಸಿ ಘಟಕ – 32 ಬಸ್ 500 DC/7 ಮಾರ್ಗದಲ್ಲಿ ಕರ್ತವ್ಯದಲ್ಲಿದ್ದ ಕಂಡಕ್ಟರ್ ಸೂರ್ಯ ಸಿಟಿ ಬಳಿ 5 ರೂಪಾಯಿ ಚಿಲ್ಲರೆ ಕೊಡುವ ವಿಷಯವಾಗಿ ಪ್ರಯಾಣಿಕ ಅಭಿನವ್ ರಾಜ್ ಎಂಬುವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಆ.8ರಂದು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಲ್ಲದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪ್ರಯಾಣಿಕರೊಂದಿಗೆ ಯಾವುದೇ ರೀತಿಯ ಅನುಚಿತ ವರ್ತನೆ ತೋರಿದ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ನಿರ್ವಾಹಕರು ಎಲ್ಲಿಂದ ಚಿಲ್ಲರೆ ತಂದು ಕೊಡಬೇಕು?: ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ತೋರಿವುದು ತಪ್ಪು. ಆದರೆ, ಪ್ರಯಾಣಿಕರಿಗೆ ಸರಿಯಾದ ಚಿಲ್ಲರೆ ಕೊಡಬೇಕಾದರೆ ಬರಿಗೈಯಲ್ಲಿ ಬರುವ ನಿರ್ವಾಹಕರು ಎಲ್ಲಿಂದ ಚಿಲ್ಲರೆ ತಂದು ಕೊಡಬೇಕು ಮುಖ್ಯ ಸಂಚಾರ ವ್ಯವಸ್ಥಾಪಕರೆ? ಅವರಿಗೆ ನಿಮ್ಮ ಡಿಪೋಗಳಲ್ಲಿ 200-300 ರೂಪಾಯಿ ಚಿಲ್ಲರೆ ಕೊಟ್ಟು ಕಳುಹಿಸಿದರೆ ಈ ಸಮಸ್ಯೆಯೇ ಆಗುವುದಿಲ್ಲವಲ್ಲ?
ಇನ್ನು ನೀವು ನಿರ್ವಾಹಕರು ಕರ್ತವ್ಯದ ಮೇಲೆ ಇದ್ದಾಗ ಅವರ ಬಳಿ 1 ರೂಪಾಯಿ ಹೆಚ್ಚಾಗಿ ಇದ್ದರೂ ಕಾರಣ ಕೇಳಿ ನೋಡಿಸ್ ಜಾರಿ ಮಾಡಿ ಬಳಿಕ ಅಮಾನತು ಮಾಡುತ್ತೀರಿ. ಅಲ್ಲದೆ ನೀವು ನೌಕರರನ್ನು ತುಚ್ಯವಾಗಿ ಕಾಣುವ ಸಂಸ್ಕೃತಿ ಬೆಳೆಸಿಕೊಂಡಿದ್ದೀರಿ. ಅವರು ಕೂಡ ನಿಮ್ಮಂತೆ ಸಾರ್ವಜನಕ ಸೇವೆ ಮಾಡುತ್ತಿರುವವರು ಎಂಬುವುದು ನೀವು ಸೇರಿದಂತೆ ಯಾವೊಬ್ಬ ಅಧಿಕಾರಿಯ ತಲೆಯಲ್ಲೂ ಇಲ್ಲ.
ಪ್ರಯಾಣಿಕರು ತಪ್ಪು ಮಾಡಿದರೂ ಚಾಲನಾ ಸಿಬ್ಬಂದಿಗಳಿಗೆ ಅಮಾನತಿನ ಶಿಕ್ಷೆ: ಅಲ್ಲದೆ, ಇಲ್ಲಿ ಪ್ರಯಾಣಿಕರು ತಪ್ಪು ಮಾಡಿದರೂ ಕೂಡಲೇ ನಿರ್ವಾಹಕರಿಗೆ ಅಥವಾ ಚಾಲನಾ ಸಿಬ್ಬಂದಿಗಳನ್ನು ಅಮಾನತಿನ ಶಿಕ್ಷೆಗೆ ಒಳಪಡಿಸುತ್ತೀರಿ. ಅಮಾನತು ಮಾಡುವ ಮುನ್ನ ನಿಮ್ಮ ಸಿಬ್ಬಂದಿ ತಪ್ಪು ಮಾಡಿದ್ದಾರೆಯೇ ಒಂದು ವೇಳೆ ತಪ್ಪಾಗಿದ್ದಾರೆ ಅದು ಹೇಗಾಯಿತು ಎಂಬುದರ ಬಗ್ಗೆ ಗಮನವನ್ನೇ ಹರಿಸದೆ ಏಕಾಏಕೆ ಅಮಾನತು ಮಾಡುತ್ತೀರಿ. ಇದು ನ್ಯಾಯವೇ?
ಇನ್ನು ನಿಮ್ಮ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಬಹುತೇಕ ನಿರ್ವಾಹಕರು ಅಥವಾ ಚಾಲನಾ ಇಂದಿಗೆ ಭಯ ಮತ್ತು ಒತ್ತಡದಲ್ಲೇ ಕೆಲಸ ಮಾಡುವಂತೆ ನಡೆದುಕೊಳ್ಳುತ್ತಿದ್ದೀರಿ. ಏಕೆ ಈ ರೀತಿ ಮಾಡುವುದರಿಂದ ನಿಮಗೆ ಆಗುವ ಲಾಭವಾದರೂ ಏನು? ಗೊತ್ತಾಗುತ್ತಿಲ್ಲ.
ನೋಡಿ ಇಲ್ಲಿ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಇದೆ ಎಂದು ನಿಮಗೂ ಗೊತ್ತಿದೆ. ಆದರೆ ಆ ಸಮಸ್ಯೆಗೆ ಪರಿಹಾರ ಕಂಡಕೊಳ್ಳುವ ಬದಲಿಗೆ ನಿರ್ವಾಹಕರನ್ನು ಮುಲಾಜಿಲ್ಲದೆ ಅಮಾನತು ಮಾಡಿ ಬಿಡುತ್ತೀರಿ. ಇದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ನೀವು ಕೊಡುವ ಸಂದೇಶ ಏನು ಗೊತ್ತಾ? ನಾವು ತಪ್ಪು ಮಾಡಿದರೂ ಸಂಸ್ಥೆಯ ಸಿಬ್ಬಂದಿಗೆ ಶಿಕ್ಷೆಯಾಗುತ್ತದೆ. ನಮಗೆ ಸಂಸ್ಥೆಯ ಅಧಿಕಾರಿಗಳು ಹಿಂದೆ ನಿಲ್ಲುತ್ತಾರೆ ಎಂದು ಬಹುತೇಕ ಪ್ರಯಾಣಿಕರು ತಪ್ಪುಮೇಲೆ ತಪ್ಪು ಮಾಡುತ್ತಲೇ ಇರುತ್ತಾರೆ.
ಹೀಗಾಗಿ ನೀವು ಒಂದು ಸೈಡ್ ಶಿಕ್ಷೆಕೊಡುವ ಬದಲಿಗೆ ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆಕೊಡಿ. ಅದನ್ನು ಬಿಟ್ಟು ಪ್ರಯಾಣಿಕರು ನಮ್ಮ ದೇವರು ಅವರಿಂದಲೇ ಸಂಸ್ಥೆ ನಡೆದಯುತ್ತಿರುವುದು ಅವರಿಲ್ಲದಿದ್ದರೆ ಸಂಸ್ಥೆಗೆ ಉಳಿಗಾಲವಿಲ್ಲ ಎಂದು ಹೇಳುತ್ತೀರಿ. ಇದು ಸತ್ಯ. ಅದರಂತೆ ಚಾಲನಾ ಸಿಬ್ಬಂದಿ ಇಲ್ಲದೆ ನಿಮ್ಮ ಸಂಸ್ಥೆಗೆ ಉಳಿಗಾಲ ವಿದೆಯೇ? ಈ ಬಗ್ಗೆಯೂ ಯೋಚಿಸಲಬೇಕಲ್ಲ?
ದಂಡಂ ದಶಗುಣಂ ಎಂದರೆ ಹೇಗೆ ಮುಖ್ಯ ಸಂಚಾರ ವ್ಯವಸ್ಥಾಪಕರೆ?: ನೀವು ಎಸಿ ಅಥವಾ ಫ್ಯಾನ್ ಕೆಳಗೆ ಕಚೇರಿಯಲ್ಲಿ ಕುಳಿತು ಆದೇಶ ಮಾಡುವುದು ನಿಮಗೆ ನೀರು ಕುಡಿದಷ್ಟೇ ಸುಲಭ. ಆದರೆ, ಚಾಲನಾ ಸಿಬ್ಬಂದಿಗಳು ನಿತ್ಯ ಪಡುತ್ತಿರುವ ಶ್ರಮ ನಿಮಗೇನು ಗೊತ್ತು ಹೇಳಿ. ಬಹುತೇಕ ಡಿಪೋಗಳಲ್ಲಿ ರಜೆ ಹಾಕಬೇಕಾದರೂ ಲಂಚ ಕೊಡಬೇಕು. ರೂಟ್ ಬೇಕಾದರೂ ಲಂಚ ಕೊಡಬೇಕು. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕು.
ಇನ್ನು ಕೆಲ ಪ್ರಯಾಣಿಕರು ಏಕ ವಚನದಲ್ಲೇ ಚಾಲನಾ ಸಿಬ್ಬಂದಿಗಳನ್ನು ಕರೆಯುತ್ತಾರೆ ಅಥವಾ ಮಾತನಾಡಿಸುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ. ಇಂದು ನಿಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಚಾಲನಾ ಸಿಬ್ಬಂದಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಇದ್ದಾರೆ. ಅವರಿಗೂ ಅವರದೆ ಆದ ಗೌರವ (Respect) ಇದೆ ಅಲ್ಲವೇ? ಆ ಗೌರವವನ್ನು ಕೊಡಬೇಕಲ್ಲ. ಈ ಬಗ್ಗೆ ಏಕೆ ನೀವು ಸಾರ್ವಜನಿಕ ಪ್ರಯಾಣಿಕರಲ್ಲಿ ಅರಿವು ಮೂಡಿಸುವುದಿಲ್ಲ.
ನಿಮಗೆ ಸಂಸ್ಥೆಯ ತಳಪಾಯವಾಗಿ ನಿಂತು ಸಂಸ್ಥೆಯನ್ನು ಏಷ್ಯಾಖಂಡದಲ್ಲೇ ನಂ.1 ಸ್ಥಾನಕ್ಕೆ ತಂದಿದ್ದಾರಲ್ಲ ಅವರು ಯಾರು ನೀವಾ? ಇಲ್ಲತಾನೆ ಅವರು ಚಾಲನಾ ಸಿಬ್ಬಂದಿ. ನೀವು ಅವರ ಪರಿಶ್ರಮದಿಂದ ಬಂದ ಪ್ರಶಸ್ತಿಗಳನ್ನು ಸೂಟುಬೂಟು ಹಾಕಿಕೊಂಡು ಹೋಗಿ ಜತೆಗೆ ಇಡೀ ಫ್ಯಾಲಿಯನ್ನು ಕರೆದುಕೊಂಡು ಹೋಗಿ ಆ ಪ್ರಶಸ್ತಿಯನ್ನು ಗೌರವಯುತವಾಗಿ ಪಡೆದು ಹೆಮ್ಮೆಯಿಂದ ಬರುತ್ತೀರಿ. ಇದು ಖುಷಿಯೆ. ಆದರೆ ಈ ಸಂತೋಷಕ್ಕೆ ಕಾರಣರಾದವರು ಮಾತ್ರ ನಿಮಗೆ ಕಾಣುವುದೆ ಇಲ್ಲ. ಇದು ದುರಂತ.
ಏನೆ ಇರಲಿ ಸಂಸ್ಥೆಯಲ್ಲಿ ಸಾರ್ವಜನಿಕ ಪ್ರಯಾಣಿಕರೊಂದಿಗೆ ಸದಾ ಒಡನಾಟವಿಟ್ಟುಕೊಂಡು, ನಿತ್ಯ ಅವರೊಂದಿಗೆ ಸಾಗುವ ಚಾಲನಾ ಸಿಬ್ಬಂದಿಗಳ ಸಮಸ್ಯೆಯನ್ನು ಕೇಳಿ ತಿಳಿದುಕೊಂಡು ಪರಿಹರಿಸುವ ನಿಟ್ಟಿನಲ್ಲಿ ಅಮಾನತು ಮಾಡುವಷ್ಟೇ ತುರ್ತಾಗಿ ಕ್ರಮ ತೆಗೆದುಕೊಳ್ಳಿ. ಆಗ ನಿಮ್ಮ ಮೇಲೆ ಪ್ರಯಾಣಿಕರಿಗೆ ಮತ್ತು ಸಂಸ್ಥೆಯ ಬೆನ್ನೆಲುಬಾಗಿ ನಿಂತಿರುವ ಚಾಲನಾ ಸಿಬ್ಬಂದಿಗೂ ಗೌರವ ಹೆಚ್ಚಾಗುತ್ತದೆ ಅದನ್ನು ಬಿಟ್ಟು ದಂಡಂ ದಶಗುಣಂ ಎಂದರೆ ಹೇಗೆ ಮುಖ್ಯ ಸಂಚಾರ ವ್ಯವಸ್ಥಾಪಕರೆ?