NEWSಸಂಸ್ಕೃತಿ

ಅಮೆರಿಕದ ಸ್ವಾತಂತ್ರ ಪ್ರತಿಮೆ, ಗುಜರಾತಿನ ಏಕತಾ ಪ್ರತಿಮೆಗಳ ಸಾಲಿಗೆ ಸೇರಲಿರುವ ‘ಪ್ರಗತಿ ಪ್ರತಿಮೆ’

ವಿಜಯಪಥ ಸಮಗ್ರ ಸುದ್ದಿ
  • ನೆನಪು ನಂದಾದೀಪ: ನಾಡಪ್ರಭುವಿನ ಸ್ಮೃತಿಗೆ ಸರಕಾರದ ವಿಶಿಷ್ಟ ಅಭಿಯಾನ
  • ಕೆಂಪೇಗೌಡ ಥೀಮ್ ಪಾರ್ಕ್‌ಗೆ ಎಲ್ಲ ಕೆರೆಕಟ್ಟೆಗಳ ಪವಿತ್ರ ಮಣ್ಣಿನ ಸಂಗ್ರಹ
  • 45 ದಿನಗಳ ಅಭಿಯಾನ; 31 ಜಿಲ್ಲೆಗಳಲ್ಲೂ ಎಲ್‌ಇಡಿ ವಾಹನಗಳ ಯಾತ್ರೆ

ಬೆಂಗಳೂರು: ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ನೆನಪನ್ನು ಅಜರಾಮರಗೊಳಿಸಲು ಮತ್ತು ಇದಕ್ಕಾಗಿ ಇಡೀ ನಾಡಿನ ಜನತೆಯನ್ನು ಏಕತೆಯ ಭಾವದಲ್ಲಿ ಒಗ್ಗೂಡಿಸಲು ನಿರ್ಧರಿಸಿರುವ ರಾಜ್ಯ ಸರಕಾರವು ಇದಕ್ಕಾಗಿ 45 ದಿನಗಳ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಒಂದೆರಡು ತಿಂಗಳಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿರುವ ಸರಕಾರವು, ಇದಕ್ಕೆ ಪೂರ್ವಭಾವಿಯಾಗಿ ‘ಉದ್ಘಾಟನಾ ಅಭಿಯಾನ’ವನ್ನು ನಡೆಸಲಿದೆ. ಸೆಪ್ಟೆಂಬರ್ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಹಸಿರು ನಿಶಾನೆ ಕಾಣಲಿರುವ ಅಭಿಯಾನವು ರಾಜ್ಯದ 31 ಜಿಲ್ಲೆಗಳಲ್ಲೂ ನಡೆಯಲಿದೆ.

ರಾಜ್ಯ ಸರಕಾರವು ಪ್ರಧಾನಿ ನರೇಂದ್ರ ಮೋದಿಯವರ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್’ ಮಂತ್ರಘೋಷಕ್ಕೆ ತಕ್ಕಂತೆ ಎಲ್ಲ ಜನ ಸಮುದಾಯಗಳನ್ನೂ ಒಳಗೊಂಡು ನವಕರ್ನಾಟಕವನ್ನು ಕಟ್ಟಲು ಸಂಕಲ್ಪ ಮಾಡಿದೆ. ಇದಕ್ಕೆ ಪೂರಕವಾಗಿ ಅದು ‘ನಾಡ ಕಟ್ಟೋಣ ಬನ್ನಿ’ ಎನ್ನುವ ಘೋಷವಾಕ್ಯವನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರೂಪಿಸಿದೆ.

ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಲು ಕೆಂಪೇಗೌಡರೇ ಮೂಲಕಾರಣ. ಹೀಗಾಗಿ, ಅವರ ಪ್ರತಿಮೆಯ ಉದ್ಘಾಟನೆಯಲ್ಲಿ ಇಡೀ ರಾಜ್ಯದ ಜನರು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಪಾಲ್ಗೊಳ್ಳಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಈ ಕನಸಿನೊಂದಿಗೆ ರೂಪು ಪಡೆದಿರುವ ಅಭಿಯಾನದ ಅಡಿಯಲ್ಲಿ ಎಲ್ಲ ಜಿಲ್ಲೆಗಳ ಪ್ರತಿ ಹಳ್ಳಿಯ ಪವಿತ್ರ ಮೃತ್ತಿಕೆ (ಮಣ್ಣು)ಯನ್ನು ಆಯಾಯಾ ಊರುಗಳಲ್ಲಿರುವ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಕೊಳ, ಚಿಲುಮೆ ಮತ್ತು ಝರಿಗಳಿಂದ ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಜತೆಗೆ ನಾಡಿನ ಉದ್ದಗಲಕ್ಕೂ ಇರುವ ಅನುಕರಣೀಯ ಸಾಧಕರ ಮನೆಗಳಿಂದಲೂ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ. ಇದಕ್ಕೆ ಮುಖ್ಯಮಂತ್ರಿ ಕೂಡ ಒಪ್ಪಿಗೆ ಸೂಚಿಸಿದ್ದು ಅದನ್ನು ಯಾವ ರೀತಿ ಅನುಷ್ಠಾನ ಮಾಡಬೇಕು ಎನ್ನುವುದರ ಬಗ್ಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ಗುರುವಾರದಂದೇ ಕಾರ್ಯ ಯೋಜನೆ ಹೊರಬೀಳುತ್ತದೆ.

ಇದಕ್ಕಾಗಿ ಬೃಹತ್ ಎಲ್‌ಇಡಿ ಪರದೆಯನ್ನು ಅಳವಡಿಸಿರುವ ತಲಾ ಒಂದು ವಾಹನವನ್ನು ಪ್ರತೀ ಜಿಲ್ಲೆಗೂ ನಿಯೋಜಿಸಲಾಗುವುದು. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮತ್ತು ಈ ಪರಿಕಲ್ಪನೆಯ ರೂವಾರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ನಾಡಿನ ಪ್ರಮುಖ ಸ್ವಾಮೀಜಿಗಳ ಸಂದೇಶಗಳು ಬಿತ್ತರವಾಗಲಿವೆ. ಜೊತೆಗೆ, ಕೆಂಪೇಗೌಡರಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರವೂ ಪ್ರಸಾರವಾಗಲಿದ್ದು, ಜನರನ್ನು ಆಕರ್ಷಿಸಲಿದೆ ಎಂದು ತಿಳಿದುಬಂದಿದೆ. ಇದಲ್ಲದೆ, ಎಲ್ಲ ಜಿಲ್ಲೆಗಳಲ್ಲೂ ಇರುವ ಮಠಮಾನ್ಯಗಳ ಶ್ರೀಗಳು, ದೇವಸ್ಥಾನಗಳು, ಸ್ವಾತಂತ್ರ ಹೋರಾಟಗಾರರು, ತಾರಾ ವರ್ಚಸ್ಸಿನ ಸಾಧಕರನ್ನು ಕೂಡ ಒಳಗೊಳ್ಳಲು ರಾಜ್ಯ ಬಿಜೆಪಿ ಸರಕಾರವು ತೀರ್ಮಾನಿಸಿದೆ. ಒಟ್ಟಿನಲ್ಲಿ ಇದೊಂದು ‘ಮೆಗಾ ಈವೆಂಟ್’ ಆಗುವುದರಲ್ಲಿ ಅನುಮಾನವಿಲ್ಲ!

ರಾಜ್ಯ ಬಿಜೆಪಿ ಸರಕಾರವು ಮಾಡಿರುವ ಅಂದಾಜಿನ ಪ್ರಕಾರ, ಎಲ್ಲ ಹಳ್ಳಿಗಳಲ್ಲಿ ನಡೆಯಲಿರುವ ‘ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ’ವು ಗಿನ್ನಿಸ್ ದಾಖಲೆಯಾಗಲಿದೆ. ಇಲ್ಲದಿದ್ದರೆ, ಈ ಅಭಿಯಾನ ನಡೆಯುವ ಒಂದೂವರೆ ತಿಂಗಳುದ್ದಕ್ಕೂ ರಾಜ್ಯದ 10 ಸಾವಿರ ದೇಗುಲಗಳಲ್ಲಿ ನಂದಾದೀಪಗಳು ಪ್ರಜ್ವಲಿಸಲಿದ್ದು, ಇದೂ ಗಿನ್ನಿಸ್ ದಾಖಲೆಯಾಗುವುದು ನಿಚ್ಚಳವಾಗಿದೆ. ಅಭಿಯಾನದ ಬಗ್ಗೆ ಭಾರೀ ಉತ್ಸಾಹದಿಂದಿರುವ ರಾಜ್ಯ ಸರಕಾರವು, ಆರಂಭದ ದಿನವಾದ ಸೆ.1ರ ಗುರುವಾರ ದೇವನಹಳ್ಳಿಯ ವಿಮಾನ ನಿಲ್ದಾಣದ ಬಳಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಒಗ್ಗೂಡಿಸುವ ಒಲವಿನಲ್ಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ವಿಶ್ವಾಸ ರಾಜ್ಯ ಸರಕಾರದ್ದಾಗಿದೆ. ಇದಾದ ಬಳಿಕ, ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ, ವಿಮಾನ ನಿಲ್ದಾಣದ ಸಮುಚ್ಚಯದಲ್ಲಿ ತಲೆ ಎತ್ತುತ್ತಿರುವ ಕೆಂಪೇಗೌಡರ ಭವ್ಯವಾದ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸುವುದು ಅದರ ಸದುದ್ದೇಶವಾಗಿದೆ.

ಕೆಂಪೇಗೌಡರದ್ದು ಪ್ರಗತಿ ಪ್ರತಿಮೆ?: ಅಮೆರಿಕದ ಸ್ವಾತಂತ್ರ ಪ್ರತಿಮೆ, ಗುಜರಾತಿನ ಏಕತಾ ಪ್ರತಿಮೆಗಳ ಸಾಲಿಗೆ 108 ಅಡಿಯ ಕೆಂಪೇಗೌಡರ ಪ್ರತಿಮೆ ಕೂಡ ಸೇರಲಿದ್ದು ಅದಕ್ಕೆ ‘ಪ್ರಗತಿ ಪ್ರತಿಮೆ’ (statue of prosperity) ಎಂದು ನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದು ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಆಗಲಿದೆ ಎನ್ನಲಾಗಿದೆ.

ನಾಡಪ್ರಭು ಕೆಂಪೇಗೌಡರೆಂದರೆ ಪ್ರಗತಿ ಮತ್ತು ಅಭ್ಯುದಯದ ನಾಗಾಲೋಟಕ್ಕೊಂದು ಸಂಕೇತ. ಅವರು ಒಂದು ದಿವ್ಯವಾದ ಘಳಿಗೆಯಲ್ಲಿ ಬೆಂಗಳೂರಿನ ಸ್ಥಾಪನೆಗೆ ಶ್ರೀಕಾರ ಹಾಕಿದರು. ಇದರ ಫಲವಾಗಿ ಬೆಂಗಳೂರು ಇಂದು ವಿಶ್ವ ಮಟ್ಟದಲ್ಲಿ ರಾರಾಜಿಸುತ್ತಿದೆ. ಹೀಗಾಗಿಯೇ, ಈ ಪ್ರತಿಮೆಗೆ ‘ಪ್ರಗತಿ ಪ್ರತಿಮೆ’ (Statue of Prosperity) ಎಂದು ಹೆಸರಿಡಲಾಗುತ್ತಿದೆ.

l ಡಾ.ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ