ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಂಕಿಯ ಅವಘಡಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಅದಕ್ಕೆ ನಿದರ್ಶ ಎಂಬಂತೆ ತಡರಾತ್ರಿ ಮತ್ತೊಂದು ಅಗ್ನಿ ದುರಂತ ನಡೆದಿದ್ದು, ಪರಿಣಾಮ ಐದು ಅಂತಸ್ತಿನ ಮಹಡಿ ಭಾಗಶಃ ಭಸ್ಮವಾಗಿರುವುದು ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಣಸವಾಡಿ ಔಟರ್ ರಿಂಗ್ ರಸ್ತೆಯಲ್ಲಿ ಜರುಗಿದೆ.
ತಡರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕಟ್ಟಡದಲ್ಲಿ ಸಿಲುಕಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನು ಅಗ್ನಿಶಾಮಕದಳ ನೌಕರರು ರಕ್ಷಿಸಿದ್ದಾರೆ. ಫರ್ನಿಚರ್ ಅಂಗಡಿ, ಕೋಚಿಂಗ್ ಸೆಂಟರ್, ಐಟಿ ಕಂಪನಿ ಸಂಪೂರ್ಣ ಸುಟ್ಟು ಹೋಗಿದೆ.
ಈ ಅವಘಡಕ್ಕೆ ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ. ಆದರೆ ಇದು ಶಾರ್ಟ್ ಸರ್ಕ್ಯೂಟ್‌ನಿಂದ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಭಾನುವಾರ ರಜೆ ಮತ್ತು ರಾತ್ರಿ ಈ ಘಟನೆ ಸಂಭವಿಸಿದ್ದರಿಂದ ಹೆಚ್ಚಿನ ಜನ ಕಟ್ಟಡದಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಜೀವಹಾನಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ನೆಲ ಹಾಗೂ ಮೊದಲ ಮಹಡಿಯಲ್ಲಿ ಫರ್ನಿಚರ್ ಅಂಗಡಿ, ಎರಡನೇ ಮಹಡಿಯಲ್ಲಿ ಕಾಮೆಡ್ ಕೋಚಿಂಗ್ ಸೆಂಟರ್, 3 ಮತ್ತು 4ನೇ ಮಹಡಿಯಲ್ಲಿ ಬ್ರೇಕ್ಸ್ ಕಂಟ್ರೋಲ್ಸ್ ಹೆಸರಿನ ಸಾಫ್ಟ್‌ವೇರ್ ಕಂಪನಿ ಇತ್ತು. ಅವಘಡದ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.