ಬೆಳಗಾವಿ: ಸುವರ್ಣಸೌಧದ ಮುಂದೆ ಕಳೆದ 7ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾರಿಗೆ ನೌಕರರನ್ನು ಸಂಜೆ 7ಗಂಟೆ ಸುಮಾರಿಗೆ ಪೊಲೀಸರು ಬಂಧಿಸಿ ಧಾರವಾಡ ಮಾರ್ಗವಾಗಿ ಕರೆದುಕೊಂಡು ಹೋಗುತ್ತಿದ್ದಾರೆ.
ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕಳೆದ ಇದೇ ಡಿ.19ರಿಂದ ಸಾರಿಗೆ ನೌಕರರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೀಗಾಗಿ ರಣಹೇಡಿ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುವ ಬದಲಿಗೆ ಉಪವಾಸ ಕುಳಿತ ನೌಕರರನ್ನೇ ಬಂಧಿಸಿದೆ.
ಸದ್ಯ ಧಾರವಾಡದತ್ತ ನೌಕರರನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿಯೂ ಕೂಡ ಇಲ್ಲ. ಅಜ್ಞಾತ ಸ್ಥಳದಲ್ಲಿ ನೌಕರರ ಇರಿಸಲು ಸಂಚು ರೂಪಿಸಿದೆ ಸರ್ಕಾರ ಎಂದು ನೌಕರರು ಕಿಡಿಕಾರುತ್ತಿದ್ದಾರೆ.
ಈ ನಡುವೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ನೌಕರರು ಈಗಾಗಲೇ ಅಸ್ವಸ್ಥಗೊಂಡಿದ್ದು ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಆದರೆ ಅದಾವುದನ್ನು ಲೆಕ್ಕಿಸದೆ ನೌಕರರ ಪ್ರಾಣಕ್ಕೂ ಬೆಲೆಕೊಡದ ಸರ್ಕಾರ ಪೊಲೀಸರನ್ನು ಛೂ ಬಿಟ್ಟು ಬಂಧಿಸಿರುವುದಕ್ಕೆ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ ಪೊಲೀಸರ ವಶದಲ್ಲಿರುವ ಉಪವಾಸ ಸತ್ಯಾಗ್ರಹ ಕುಳಿತ ನೌಕರರ ಪ್ರಾಣಕ್ಕೆ ಏನಾದರೂ ಸಂಚಕಾರವಾದರೆ ನೇರವಾಗಿ ರಾಜ್ಯ ಸರ್ಕಾರ ಹೊಣೆ ಹೊರಬೇಕಾಗುತ್ತದೆ. ಜತೆಗೆ ಪೊಲೀಸರ ದೌರ್ಜನ್ಯ ಎಲ್ಲೆ ಮೀರಿರುವುದಕ್ಕೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ನೌಕರರು ಕಿಡಿಕಾರಿದ್ದಾರೆ.
ನಾಳೆ ಬೃಹತ್ ಮಟ್ಟದಲ್ಲಿ ಸಾರಿಗೆ ನೌಕರರು ಹೋರಾಟ ಮಾಡುವುದಕ್ಕೆ ಸಜ್ಜಾಗಿದ್ದು ಈ ಬಗ್ಗೆ ವಿಷಯ ಅರಿತ ಸರ್ಕಾರ ಪೊಲೀಸರನ್ನು ಬಿಟ್ಟು ದೌಜ್ಯನ್ಯ ಎಸಗುತ್ತಿದೆ. ಇದು ರಾಜ್ಯ ಸರ್ಕಾರದ ನಡೆಗೆ ಹಿಡಿದ ಕನ್ನಡಿ ಎಂದು ನೌಕರರು ಸಿಟ್ಟಿಗೆದ್ದಿದ್ದಾರೆ.
ಒಟ್ಟಾರೆ ನಾಳೆ ನೌಕರರು ಒಂದಾಗಿ ನಮ್ಮ ಸರ್ಕಾರಕ್ಕೆ ಬುದ್ಧಿ ಕಲಿಸಲಿದ್ದಾರೆ ಎಂಬುದನ್ನು ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಮೂರು ದಿನದ ಹಿಂದೆಯೇ ನೌಕರರನ್ನು ಸತ್ಯಾಗ್ರಹ ಸ್ಥಳದಿಂದ ಎಬ್ಬಿಸಲು ಪೊಲೀಸರನ್ನು ಬಿಟ್ಟಿದ್ದರು. ಆ ವೇಳೆ ಪೊಲೀಸರು ಕೂಡ ನೌಕರರನ್ನು ಹೆದುರಿಸಿದ್ದರು. ಆದರೂ ಅದಾವುದಕ್ಕೂ ಹೆದರದೆ ನೌಕರರು ಉಪವಾಸ ಸತ್ಯಾಗ್ರಹ ಮುಂದುವರಿಸುತ್ತಿದ್ದರು.
ಇನ್ನು ಇಂದು ಸತ್ಯಾಗ್ರಹ ಸ್ಥಳಕ್ಕೆ ಬರುತ್ತಿದ್ದ ನೌಕರರಿಗೆ ಬೇರೆ ಸ್ಥಳದ ವ್ಯವಸ್ಥೆ ಮಾಡಿ ಸತ್ಯಾಗ್ರಹ ಸ್ಥಳದಲ್ಲಿ ಉಪವಾಸ ಕುಳಿತಿದ್ದ 15-20 ಮಂದಿ ನೌಕರರನ್ನು ಕತ್ತಲಾಗುತ್ತಿದ್ದಂತೆ ಈಗ ಬಂಧಿಸಿದ್ದು ಅಜ್ಞಾತ ಸ್ಥಳಕ್ಕೆ ಕೊರೆದುಕೊಂಡು ಹೋಗುತ್ತಿದ್ದಾರೆ…. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ…