ಬೀದರ್: ತಾನು ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದ್ದ ನೋವಿನಲ್ಲಿದ್ದ ಬಡಪಾಯಿ ರೈತನಿಂದ ಬೀದರ್ನ ಎಎಸ್‌ಐ ಒಬ್ಬ 1000 ರೂಪಾಯಿ ಲಂಚಕ್ಕೆ ಕೈ ಚಾಚಿ ಈಗ ಅಮಾನತು ಶಿಕ್ಷಗೆ ಒಳಗಾಗಿದ್ದಾನೆ.
ಭ್ರಷ್ಟ ಈ ಪೊಲೀಸನ ಬಗ್ಗೆ ಲಂಚಾವತಾರವನ್ನು ಕಾತರಿಪಡಿಸಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಲಂಚಬಾಕ ಎಎಸ್‌ಐ ಶೌರಾಜ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬೀದರ್ನಲ್ಲಿ ಅಸಹಾಯಕ ರೈತನೆದುರು ಚಿಲ್ಲರೆ ಕಾಸಿಗೆ ಈ ಪೊಲೀಸಪ್ಪ ಕೈಚಾಚಿದ್ದ. ಕಬ್ಬು ಸುಟ್ಟು ಕರಕಲಾಗಿದ್ದ ಜಮೀನಿನ ಪಂಚನಾಮೆಗೆ ಬಂದಿದ್ದ ಎಎಸ್‌ಐ ಶೌರಾಜ್, ಈ ಹೀನ ಕೃತ್ಯಕ್ಕೆ ಇಳಿದಿದ್ದ. ಜಿಲ್ಲೆಯ ಬೇಲೂರು ಗ್ರಾಮದ ರೈತನಿಂದ ಮಾನವೀಯತೆಯೇ ಇಲ್ಲದೇ ಎಎಸ್‌ಐ ಶೌರಾಜ್, ಹಣ ವಸೂಲಿ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಒಂದು ಸಾವಿರ ರೂಪಾಯಿಗೆ ರೈತನ ಬಳಿ ಬೇಡಿಕೆ ಇಟ್ಟಿದ್ದ ಹುಲಸೂರು ಠಾಣೆಯ ASI ಶೌರಾಜ್ ಕಡೆಗೂ 400 ರೂಪಾಯಿ ಪಡೆದೇ ತೀರಿದ್ರು. ಅನ್ನದಾತನ ಬಳಿ ಚಿಲ್ಲರೆ ಹಣಕ್ಕೆ ಕೈ ಚಾಚಿದ ಈತನ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು, ಆ ವರದಿ ಮಂದ ಕೆಲವೇ ಗಂಟೆಗಳಲ್ಲಿ ಎಎಸ್ಐಯನ್ನು ಆಮಾನತು ಮಾಡಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಬರದ ಛಾಯೆ ಆವರಿಸಿಕೊಂಡು ಮೊದಲೇ ಅನ್ನದಾತರು ಸಂಕಷ್ಟದಲ್ಲಿದ್ದರೆ. ಹಾಕಿರುವ ಫಸಲು ಕೈ ಸೇರದೆ ಬಳಲಿಹೊತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಾನವೀಯತೆ ಬಿಟ್ಟು ಇಂತಹ ಪರಿಸ್ಥಿತಿಯಲ್ಲಿ ರೈತರಿಂದ ಹಣ ಪೀಕುವ ಕೆಲಸವನ್ನು ಭ್ರಷ್ಟ ಅಧಿಕಾರಿಗಳು ಮಾಡುತ್ತಿರುವುದು ಭಾರಿ ನೋವಿನ ಸಂಘತಿ. ಇನ್ನಾದರೂ ಇದನ್ನು ಬಿಟ್ಟು ನೇಗಿಲ ಯೋಗಿಯ ನೆರವಿಗೆ ಬರಬೇಕಿದೆ.