NEWSನಮ್ಮಜಿಲ್ಲೆಮೈಸೂರುಶಿಕ್ಷಣ

ಅತ್ತಹಳ್ಳಿ: 27 ವರ್ಷಗಳ ಬಳಿಕ ನೆಚ್ಚಿನ ಮೇಷ್ಟ್ರುಗಳಿಗೆ ಗುರುವಂದನೆ ಸಲ್ಲಿಸಿದ ಹಿಪ್ರಾಶಾ 1995-96ನೇ ಸಾಲಿನ ವಿದ್ಯಾರ್ಥಿಗಳು

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಹಳೇ ವಿದ್ಯಾರ್ಥಿಗಳು ತಮಗೆ ವಿದ್ಯ ಕಲಿಸಿದ ಶಿಕ್ಷಕರನ್ನು ಸ್ಮರಿಸಿ ಗುರುವಂದನೆ ಕಾರ್ಯಕ್ರಮ ಕೈಗೊಂಡಿದ್ದು ನಮಗೆ ನಿಜಕ್ಕೂ ಸಂತಸ ತಂದಿದೆ ಎಂದು ಅತ್ತಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ವಿ.ವೆಂಕಟೇಗೌಡ (VVG) ಶ್ಲಾಘಿಸಿದರು.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಅತ್ತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1993 –1996 ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳು ಶಾಲೆಯಲ್ಲಿ ಅಂದು ವಿದ್ಯಾದಾನ ಮಾಡಿ ಇಂದು ನಿವೃತ್ತರಾಗಿರುವ ಶಿಕ್ಷಕರಾದ ವಿ.ವೆಂಕಟೇಗೌಡ (ವಿವಿಜಿ) ಬಿ.ಎಲ್‌.ವೆಂಕಟೇಶ್‌ ಮೂರ್ತಿ (ಬಿಎಲ್‌ವಿ) ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ರಂಗೇಗೌಡ ಅವರನ್ನು ಅವರವರ ನಿವಾಸಕ್ಕೆ ಹೋಗಿ ಗುರುವಂದನೆ ಸಲ್ಲಿಸುವ ವೇಳೆ ಮಾತನಾಡಿದರು.

ಬಾಲ್ಯದಲ್ಲಿ ವಿದ್ಯೆ ಕಲಿಯುವಾಗ ಸಾಕಷ್ಟು ಮಕ್ಕಳಿಗೆ ಗುರುಗಳ ಶ್ರಮದ ಬಗ್ಗೆ ಅರಿವಿರುವುದಿಲ್ಲ. ಮಕ್ಕಳ ಭಾವನೆಯಲ್ಲಿ ಗುರುಗಳೆಂದರೆ ಕೇವಲ ಶಿಕ್ಷಿಸುವ ಹಾಗೂ ದೈನಂದಿನ ಪಠ್ಯ ಬೋಧಿಸುವರೆಂದೇ ಭಾವಿಸಿರುತ್ತಾರೆ. ಹತ್ತಾರು ವರ್ಷ ಕಳೆದಾಗ ಶಿಕ್ಷಕರ ಶ್ರಮ ಮತ್ತು ಮಹತ್ವ ಅರಿತು ಗೌರವಿಸುತ್ತಾರೆ ಎಂದು ಆನಂದಭಾಷ್ಪದೊಂದಿಗೆ ಕಣ್ತುಂಬಿಕೊಂಡರು.

ಇನ್ನು ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರ್ತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಬೇಕಾಗಿದೆ. ಆ ನಿಟ್ಟಿನಲ್ಲಿ ನಿವೆಲ್ಲರೂ ನಡೆಯುತ್ತಿದ್ದೀರ ಎಂದು ನಾವು ಭಾವಿಸಿದ್ದೇವೆ ಎಂದು ಮತ್ತೊಬ್ಬ ನಿವೃತ್ತ ಶಿಕ್ಷಕರಾದ ಬಿಎಲ್‌ವಿ ಸರ್‌ ನುಡಿದರು.

Advertisement

ಬಿಎಲ್‌ವಿ ಅವರನ್ನು ಬನ್ನೂರಿನ ಅವರ ನಿವಾಸದಲ್ಲಿ ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸುವ ವೇಳೆ ತಮ್ಮ 1993-1996ನೇ ಸಾಲಿನ ವಿದ್ಯಾರ್ಥಿಗಳನ್ನು ನೋಡಿ ಇವರ ಕಣ್ಣಾಲಿಗಳು ಖುಷಿಯಿಂದ ತುಂಬಿಕೊಂಡವು. ಈ ಇಳಿಯ ವಯಸ್ಸಿನಲ್ಲಿ ನನ್ನ ಶಿಷ್ಯರು ಈ ರೀತಿ ಬಂದು ಗೌರವ ಸಲ್ಲಿಸುತ್ತಿರುವುದಕ್ಕೆ ಶಿಕ್ಷಕರು ಎಂದರೆ ಯಾವ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ ಎಂಬುದನ್ನು ತೋರಿಸುತ್ತಿದೆ ಎಂದು ಭಾವುಕರಾಗಿ ನುಡಿದರು.

ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ, ಹೀಗಾಗಿ ಪುರಾಣ ಪುಣ್ಯಗಳ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ, ಇದಕ್ಕೆ ಪೂರಕವೆಂಬಂತೆ ನಮ್ಮ ಶಿಷ್ಯರಾದ ನೀವು ಈ ಮುಸಂಜೆ(ಇಳಿವಯಸ್ಸಿನಲ್ಲಿ)ಯಲ್ಲಿ ನಮ್ಮನ್ನು ಮರೆಯದೆ ಬಂದು 27 ವರ್ಷಗಳ ಬಳಿಕ ಗುರುವಂದನೆ ಸಲ್ಲಿಸುವ ಮೂಲಕ ವಿಶೇಷ ಅರ್ಥ ನೀಡುತ್ತಿರುವುದು ಸಂತಸದ ವಿಷಯ ಎಂದು ರಂಗೇಗೌಡ ಹೇಳಿದರು.

ಹಳೆಯ ವಿದ್ಯಾರ್ಥಿನಿ ಪ್ರಸ್ತುತ ಶಿಕ್ಷಕಿಯಾಗಿರುವ ಪ್ರತಿಮ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ದುಃಖದ ಸಂಗತಿಯಾದರೇ, ಇನ್ನೊಂದೆಡೆ ಈ ರೀತಿ ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದರು.

ಈ ನಮ್ಮ ಶಿಕ್ಷಕರಿಗೆ ಇಳಿವಯಸ್ಸಿನಲ್ಲಿ ಈ ರೀತಿಯ ಆತ್ಮೀಯ ಕಾರ್ಯಕ್ರಮ ಸಂದರ್ಭ ಸೃಷ್ಟಿ ಆಗೋದು ಬಹುಶಃ ಅವರ ಕಣ್ಮನಗಳು ಆನಂದ ಸಾರ್ಥಕತೆಯಿಂದ ತುಂಬಿಹೋಗುತ್ತವೆ ಎಂದು ಹೇಳಿದರು.

ಶಿಕ್ಷಕ ವೃಂದಕ್ಕೆ ಗೌರವ ನೀಡುವ ಗುರುವಂದನೆ ಕಾರ್ಯಕ್ರಮ ಮಾಡಬೇಕು ಎಂದು ನಾವೆಲ್ಲರೂ ವಾಟ್ಸ್‌ಆಪ್‌ ಗ್ರೂಪಿನಲ್ಲೇ ಚರ್ಚಿಸಿ ತೀರ್ಮಾನಿಸಿದ್ದೆವು. ಅದರಂತೆ ಪ್ರಸ್ತುತ ಈ ಮೂವರು ಶಿಕ್ಷಕರನ್ನು ಗೌರವಿಸುತ್ತಿದ್ದೇವೆ. ಆದರೆ, ನಮ್ಮ ಗುರುಗಳಾದ ಶ್ರೀನಿವಾಸ್‌, ಎಪಿಕೆ, ಪಿಸಿ ಮಾಸ್ಟರ್‌ ಅವರು ಇಹಲೋಕ ತ್ಯೆಜಿಸಿದ್ದು ಅವರನ್ನು ಈ ಸಂದರ್ಭದಲ್ಲಿ ಮರೆಯುವಂತಿಲ್ಲ ಎಂದು ಸೇರಿದ್ದ ಎಲ್ಲ ಹಳೇ ವಿದ್ಯಾರ್ಥಿಗಳು ಸ್ಮರಿಸಿಕೊಂಡರು.

ಒಟ್ಟಾರೆ ಶಾಲೆಗಳಲ್ಲಿನ ಗಂಟೆಗಳ ಸದ್ದು ಹೆಚ್ಚು ಕೇಳುವ ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ ಶಿಕ್ಷಣವಂತ ವಿದ್ಯಾರ್ಥಿಗಳು ವೇಷಭೂಷಣದ ಬದಲಾಗಿ ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರ್ತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಬೇಕಿದೆ ಎಂದು ಹೇಳುವುದಕ್ಕೆ ಇಂದು ಈ ಹಳೇ ವಿದ್ಯಾರ್ಥಿಗಳು ಭಾಜನರಾಗಿದ್ದಾರೆ ಎಂದೇ ಹೇಳಬಹುದು.

ಗುರುವಂದನೆ ವೇಳೆ ಹಳೇ ವಿದ್ಯಾರ್ಥಿಗಳಾದ, ಶಿಕ್ಷಕಿ ಪ್ರತಿಮ, ಭವ್ಯ, ನವೀನಾ, ಭಾಗ್ಯ, ಪದ್ಮ, ನಾಗರಾಜು, ನಂದೀಶ, ಗಿರೀಶ, ಜಗದೀಶ, ಕೃಷ್ಣ, ಕುಮಾರ, ಮಧುಸೂದನ, ಚಂದ್ರಶೇಖರ್‌, ಸತೀಶ್‌ ಕುಮಾರ್‌ ಇತರರು ಇದ್ದರು.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!