ಬನ್ನೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಗ್ರಾಮಾಂತರ ಘಟಕದಿಂದ ಬನ್ನೂರು ಸಂತೆಮಾಳದ ಮೈಸೂರು ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆ ಪಂಜಾಬ್, ಹರಿಯಾಣ ರೈತರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದು, ಅದಕ್ಕೆ ಬೆಂಬಲವಾಗಿ ನಾವು ಶುಕ್ರವಾರ ರಾತ್ರಿ ಕೇಂದ್ರ ಸರ್ಕಾರದ ವಿರುದ್ಧ ಈ ಪಂಜಿನ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾ ನಿರತ ರೈತರು ಹೇಳಿದರು.
ದೇಶದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೂ ಹಾಗೂ ಕಾವೇರಿ ಕಬಿನಿ ಅಚ್ಚುಕಟ್ಟು ಭಾಗದ ರೈತರಿಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಾಲೆಗಳ ಮುಖಾಂತರ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಎಲ್ಲಾ ವಿಚಾರಗಳನ್ನು ಕರ್ನಾಟಕ ರಾಜ್ಯದ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿ ಹಾಗೂ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಬೆಂಬಲವಾಗಿ ಪಂಜಿನ ಮೆರವಣಿಗೆ ನಡೆಸಿ ದೆಹಲಿ ಹೋರಾಟದಲ್ಲಿ ಪೊಲೀಸ್ ಗೋಲಿಬಾರ್ ನಿಂದ ಬಲಿಯಾದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ , ತಿ.ನರಸೀಪುರ ತಾಲೂಕು ಅಧ್ಯಕ್ಷ
ಕುರುಬೂರು ಸಿದ್ದೇಶ್, ತಾಲೂಕು ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಉಪಾಧ್ಯಕ್ಷ ಹೆಗ್ಗೂರು ರಂಗರಾಜು.
ಬನ್ನೂರು ಗ್ರಾಮಾಂತರ ಘಟಕದ ಮುಖಂಡರಾದ ಬನ್ನೂರು ಸೂರಿ, ಬಿ.ಎನ್. ಶ್ರೀನಿವಾಸ್, ಅತ್ತಹಳ್ಳಿ ನಿಂಗಣ್ಣ, ಚೇತನ್, ರಾಮು, ನವೀನ, ಶಂಕರ್, ಎ.ಎನ್. ಮಹೇಶ್, ಕುಂತನಹಳ್ಳಿ ಸ್ವಾಮಿ, ಬೀಡನಹಳ್ಳಿ ಬಲರಾಮ, ಹೊನ್ನಯ್ಯ, ರಾಜಪ್ಪಾಜಿ, ಮೆಡಿಕಲ್ ಮಹೇಶ್, ನಂದಿ ಸ್ಟೋರ್ ನಟೇಶ್, ಮಾದಿಗಹಳ್ಳಿ ಜಗದೀಶ್, ಗಾಡಿಜೋಗಿಹುಂಡಿ ಕರಿಯಪ್ಪ, ಚಾಮನಹಳ್ಳಿ ಸಿದ್ದೇಗೌಡ ಇನ್ನು ಮುಂತಾದವರು ಇದ್ದರು.