ಬೀದರ್: ಆಸ್ತಿ ವಿವಾದ ನಡೆದ ಗಲಾಟೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೀದರ್ ತಾಲೂಕಿನ ನಿರ್ಣಾವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಲ್ಲಿಕಾರ್ಜುನ ರಾಜಗೀರೆ (48) ಕೊಲೆಯಾದವರು. ಜಮೀನು ಸರ್ವೇ ಸಂಬಂಧ ಬುಧವಾರ ಗಲಾಟೆ ನಡೆದಿದೆ. ಅಧಿಕಾರಿಗಳು ಸರ್ವೇ ಮಾಡಿ ಹೋದ ಬಳಿಕ ಗಲಾಟೆ ತಾರಕಕ್ಕೇರಿದ್ದು, ಕೊಲೆಯಲ್ಲಿ ಅತ್ಯವಾಗಿದೆ.
ಇನ್ನು ಲಿಂಗರಾಜ ನಿಂಬೂರೆ, ಜಗದೀಶ್ ನಿಂಬೂರೆ, ವಿರಶೆಟ್ಟಿ ನಿಂಬೂರೆ, ಧನರಾಜ್ ನಿಂಬೂರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಮಲ್ಲಿಕಾರ್ಜುನ ರಾಜಗೀರೆ ಅವರ ಪುತ್ರ ನೀಲಕಂಠ ರಾಜಗೀರೆಗೆ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನ್ಯಾಯಕ್ಕಾಗಿ ಪ್ರತಿಭಟನೆ: ಇನ್ನು ಮಲ್ಲಿಕಾರ್ಜುನ ರಾಜಗೀರೆ ಕುಟುಂಬದವರು ಕೊಡಲಿ, ಕತ್ತಿ, ಕಟ್ಟಿಗೆ ವಿವಿಧ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ಬಳಿಕ ಮನ್ನಾಏಖೇಳಿಯ ಅಂಬೇಡ್ಕರ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಗೊಂಡ ಸಮಾಜದ ಒಕ್ಕೂಟದಿಂದ ಧರಣಿ ನಡೆಸಿದ್ದಾರೆ. ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ.
ಸದ್ಯ ಈ ಪ್ರಕರಣ ಮನ್ನಾಖೇಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣ ಸಂಬಂಧಿಸಿದಂತೆ ಈಗಾಗಲೇ 6 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನುಳದವರ ಬಂಧನಕ್ಕೆ ಬಲೆ ಬೀಸಿದ್ದಾರೆ.