ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೆ ಬಲಿಯಾಗುವವರ ಸಂಖ್ಯ ಹೆಚ್ಚುತ್ತಲೇ ಇದೆ. ಆದರೂ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ.
ಅಧಿಕಾರಿಗಳ ಮತ್ತು ಸ್ವತಃ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ಬೆಂಗಳೂರಲ್ಲಿ ಇನ್ನೆಷ್ಟು ಬಲಿ ಬೇಕು ಎಂದು ಕೇಳುತ್ತಿದ್ದಾರೆ.
ಇದೀಗ ರಸ್ತೆ ಗುಂಡಿಯಿಂದ ಮತ್ತೊಂದು ಅವಘಡ ಸಂಭವಿಸಿದ್ದು, ಬೈಕ್ ಸವಾರನೊಬ್ಬ ರಸ್ತೆ ಗುಂಡಿಯಿಂದಾಗಿ ಬಿದ್ದು ಕೋಮಾಗೆ ಹೋಗಿದ್ದಾರೆ. ಈ ಸರ್ಕಾರ ಮತ್ತು ಬಿಬಿಎಂಪಿಯ ಘನ ನಿರ್ಲಕ್ಷ್ಯಕ್ಕೆ ಬೈಕ್ ಸವಾರ ಸಾವು-ಬದುಕಿನ ಮಧ್ಯೆ ಸೆಣಸಾಡುವಂತಾಗಿದೆ.
ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ಕಳೆದ ಮಂಗಳವಾರ ಘಟನೆ ನಡೆದಿದ್ದು, ಇದರಿಂದ ವಿದ್ಯಾರಣ್ಯಪುರ ನಿವಾಸಿ ಸಂದೀಪ್ (37) ಬಿದ್ದು ಈಗ ಕೋಮಾದಲ್ಲಿದ್ದಾರೆ.
ಅಂದು ರಾತ್ರಿ 9.30ರ ಸುಮಾರಿಗೆ ಸ್ನೇಹಿತರ ಜೊತೆ ಕ್ರಿಕೆಟ್ ಆಡಿ ಮನೆಗೆ ಬರುತ್ತಿದ್ದರು. ರಸ್ತೆಯಲ್ಲಿದ್ದ ಯಮಸ್ವರೂಪಿ ಗುಂಡಿ ಕಾಣಿಸದೇ ಗುಂಡಿಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಗಾಯವಾಗಿದೆ. ಕೂಡಲೇ ಅವರನ್ನು ಎಚ್ಎಂಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಲೆಗೆ ತೀವ್ರ ಗಾಯವಾಗಿರುವ ಹಿನ್ನೆಲೆಯಲ್ಲಿ ಸಂದೀಪ್‌ಗೆ ಆಪರೇಷನ್ ಮಾಡಲಾಗಿದೆ. ಸದ್ಯ ಸಂದೀಪ್ ಕೋಮಾದಲ್ಲಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಸಂದೀಪ್ ಸ್ಥಿತಿ ನೋಡಿದ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.