NEWSನಮ್ಮರಾಜ್ಯಸಿನಿಪಥ

ಬೆಳಗಾವಿ: ಅಧಿವೇಶನದಲ್ಲಿ ಅಗಲಿದ ಹಾಸ್ಯ ಕಲಾವಿದ ಉಮೇಶ್‌ರಿಗೆ ಸಿಎಂ ಸಂತಾಪ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಕನ್ನಡ ವೃತ್ತಿ ರಂಗಭೂಮಿ ಮತ್ತು ಚಲನಚಿತ್ರರಂಗದ ಜನಪ್ರಿಯ ಹಾಸ್ಯ ಕಲಾವಿದರಾಗಿದ್ದ ಎಂ.ಎಸ್. ಉಮೇಶ್ ಅವರು ತಮ್ಮ ವಿಶಿಷ್ಟ ಸಂಭಾಷಣೆ, ಅಭಿನಯ, ಅಭಿವ್ಯಕ್ತಿಗಳಿಂದ ಕನ್ನಡ ಚಿತ್ರರಸಿಕರ ಮನ ಗೆದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತೀಚೆಗೆ ಅಗಲಿದಉಮೇಶ್ ಅವರಿಗೆ ಇಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಆದರಂಭವಾದ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಂತಾಪ ಸೂಚಿಸಿದರು.

ಮೈಸೂರಿನಲ್ಲಿ ಜನಿಸಿದ ಉಮೇಶ್ ಅವರಿಗೆ ಬಾಲ್ಯದಿಂದಲೇ ರಂಗಭೂಮಿಯ ನಂಟು. ಕೆ.ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ಅ.ನ.ಕೃ. ಅವರ ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಬಿಜ್ಜಳನ ಮಗನ ಪಾತ್ರದಲ್ಲಿ ಇವರ ಅಭಿನಯ ಎಲ್ಲರ ಗಮನ ಸೆಳೆದಿತ್ತು ಎಂದು ನೆನಪಿಸಿಕೊಂಡರು.

ಇನ್ನು ಗುಬ್ಬಿ ವೀರಣ್ಣ, ಕೆ.ಹಿರಣ್ಣಯ್ಯ, ಎಂ.ಸಿ.ಮಹಾದೇವಸ್ವಾಮಿಯಂತಹ ರಂಗ ದಿಗ್ಗಜರ ಗರಡಿಯಲ್ಲಿ ಬೆಳೆದ ಉಮೇಶ್ ಅವರು, ಹಲವು ದಶಕಗಳ ಕಾಲ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಸೇವೆ ಸಲ್ಲಿಸಿದರು.

‘ಕಥಾ ಸಂಗಮ’ ತಪ್ಪಿದ ತಾಳ, ಅನುಪಮ, ಕಾಮನ ಬಿಲ್ಲು, ಶೃತಿ ಸೇರಿದಾಗ, ಗಜಪತಿ ಗರ್ವಭಂಗ, ಗುರು ಶಿಷ್ಯರು, ಡೇರ್ ಡೆವಿಲ್ ಮುಸ್ತಫಾ ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಬಹುಮುಖ ಪ್ರತಿಭೆಯಾಗಿದ್ದ ಇವರು ನಟನೆಯ ಜತೆಗೆ ಪಿಯಾನೋ ವಾದಕರಾಗಿ, ಕುಂಚ ಕಲಾವಿದರಾಗಿ, ಹಾಡುಗಾರರಾಗಿಯೂ ಖ್ಯಾತಿ ಗಳಿಸಿದ್ದರು.

ಉಮೇಶ್ ಅವರ ಐದು ದಶಕಗಳ ಕಲಾ ಸೇವೆಯಲ್ಲಿ, ಕಥಾಸಂಗಮ ಚಿತ್ರದ ‘ತಿಮ್ಮರಾಯಿ’ ಪಾತ್ರಕ್ಕೆ ಉತ್ತಮ ಪೋಷಕನಟ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ, ನಾಟಕ ಅಕಾಡೆಮಿ ಪ್ರಶಸ್ತಿ, ಮಹಾನಗರ ಪಾಲಿಕೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಹಿರಿಯ ನಟ ಎಂ.ಎಸ್. ಉಮೇಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಅನುಭವಿ ಹಾಗೂ ಉತ್ತಮ ನಟನನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿರು.

Megha
the authorMegha

Leave a Reply

error: Content is protected !!