ಬೆಳಗಾವಿ: ಉಪವಾಸ ಸತ್ಯಾಗ್ರಹ ನಿರತ ಸಾರಿಗೆ ನೌಕರರಿಗೆ KSRTC ಸಂಘ ಬೆಂಬಲ
ಬೆಂಗಳೂರು: ಬೆಳಗಾವಿಯಲ್ಲಿ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಕಳೆದ ಮೂರು ದಿನದಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ ಬೆಂಬಲ ನೀಡಲು ಇಂದು ಸಂಜೆ ನಡೆದ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ತೀರ್ಮಾನಿಸಿದೆ.
ಸಂಘದ ಗೌರವಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ನೇತೃತ್ವದಲ್ಲಿ ಬಸವನಗುಡಿಯ ಡಿ.ವಿ.ಜಿ.ರಸ್ತೆಯಲ್ಲಿರುವ ಮಣಿ ಸ್ಟೋರ್ ಬಳಿಯ ನಂ.12, ಸಂಪರ್ಕ ಕೇಂದ್ರದಲ್ಲಿ ನಡೆದ ಸಂಘದ ಪದಾಧಿಕಾರಿಗಳ ತುರ್ತು ಸಭೆ ಬಳಿಕ ಗೌರವಾಧ್ಯಕ್ಷರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವೇತನ ಮತ್ತು ವಜಾಗೊಂಡಿರುವ ನೌಕರರನ್ನು ಪ್ರಮುಖವಾಗಿ ಕೂಡಲೇ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಈ ವೇಳೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಿದ್ದು, ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೇದಿಕೆಯ ಪದಾಧಿಕಾರಿಗಳಿಗೆ ಬೆಂಬಲ ನೀಡಲು ಸಂಘದ ಪದಾಧಿಕಾರಿಗಳು ನಿರ್ಧಿಸಿರುವುದಾಗಿ ತಿಳಿಸಿದರು.
ಹೀಗಾಗಿ ಇಂದು ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಸಂಘದ ಪದಾಧಿಕಾರಿಗಳು ಮತ್ತು ನೂರಾರು ನೌಕರರು ಸತ್ಯಾಗ್ರಹ ನಿರತ ಬೆಳಗಾವಿಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದರು.
ಸರ್ಕಾರದ ಹಿಂದಿನ ಸಾರಿಗೆ ಸಚಿವರು ಕೊಟ್ಟ ಭರವಸೆಯಂತೆ ನೌಕರರ ಬೇಡಿಕೆ ಈಡೇಇಸಬೇಕು ಎಂದು ಭಾಸ್ಕರ್ ರಾವ್ ಅವರು ಕೂಡ ಆಗ್ರಹಿಸಿದ್ದಾರೆ. ಅಲ್ಲದೆ ಇಂದಿನ ಸಾರಿಗೆ ಸಚಿವರು ಸತ್ಯಾಗ್ರಹ ಸ್ಥಳಕ್ಕೆ ಹೋಗಿ ಯಾವುದೇ ಖಚಿತತೆಯನ್ನು ತಿಳಿಸದೆ ವಾಪಸ್ ಹೋಗಿರುವುದನ್ನು ಖಂಡಿಸಿದರು.