ಬೆಳಗಾವಿ: ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ 7 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಬೇರೆಡೆ ಶಿಫ್ಟ್ ಮಾಡಿ ಸತ್ಯಾಗ್ರಹ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಭಾನುವಾರ ರಾತ್ರಿ ಉಪವಾಸ ಸತ್ಯಾಗ್ರಹ ಸ್ಥಳದಿಂದ ನೌಕರರನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಬಳಿಕ ಮಧ್ಯರಾತ್ರಿ ಅವನ್ನು ಹುಬ್ಬಳ್ಳಿಯ ಬಸ್ ನಿಲ್ದಾಣದ ಬಳಿ ಪೊಲೀಸರು ಬಿಟ್ಟುಹೋಗಿದ್ದರು. ಆ ಬಳಿಕ ಅವರಿಗೆ ಮತ್ತೆ ಟೆಂಟ್ ನಂ.6ರಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಕ್ಕೆ ಅವಕಾಶಕೊಡಲಿಲ್ಲ. ಆ ವೇಳೆ ಐಪಿಎಸ್ ಮಾಜಿ ಅಧಿಕಾರಿ ಭಾಸ್ಕರ್ ರಾವ್ ಅವರ ಮಧ್ಯಪ್ರವೇಶದಿಂದ ಸುವರ್ಣಸೌಧದ ಬಳಿಯ ಕೊಂಡಸ್ಕೊಪ್ಪ ಗ್ರಾಮದಲ್ಲಿ ಸತ್ಯಾಗ್ರಹಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಪೊಲೀಸರು.
ಇನ್ನು ನಿನ್ನೆ ರಾತ್ರಿಯಿಂದಲೇ ಬೆಳಗಾವಿಗೆ ಪ್ರಯಾಣ ಬೆಳೆಸಿದ ಸಾರಿಗೆ ನೌಕರರು ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಎಲ್ಲರೂ ಒಂದೆಡೆ ಸಮಾವೇಶಗೊಂಡರು. ಆದರೆ, ಅವರಿಗೆ ಒಂದು ನಿಗದಿತ ಸ್ಥಳ ಸಿಗದಿದ್ದರಿಂದ ಜಮೀನೊಂದರಲ್ಲಿ ಕುಳಿತಿದ್ದರು. ಬಳಿಕ ಅವರಿಗೆ ಕೊಂಡಸ್ಕೊಪ್ಪದಲ್ಲಿ ವ್ಯವಸ್ಥೆ ಮಾಡಿಕೊಟ್ಟಿರುವುದರಿಂದ ಎಲ್ಲ ನೌಕರರು ಸುರಮಾರು 12ರ ವೇಳೆಗೆ ಒಂದೆಡೆ ಸೇರಿಕೊಂಡಿದ್ದಾರೆ.
ಈಗಾಗಲೇ 8 ಸಾವಿರಕ್ಕೂ ಹೆಚ್ಚು ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಬಂದು ಸೇರಿದ್ದು, ಇಂದು ಮುಖ್ಯಮಂತ್ರಿಗಳು ಸತ್ಯಾಗ್ರಹ ಸ್ಥಳಕ್ಕೆ ಬಂದು ನೌಕರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಪಷ್ಟವಾಗಿ ಏನನ್ನು ಹೇಳಿಲ್ಲ.
ಇನ್ನು ಮೇಲೆ ಬಿಸಿಲಿನ ಝಳ ಕೆಳಗೆ ಕಾದ ನೆಲ ಇದಾವುದನ್ನು ಲೆಕ್ಕಿಸದೆ ಸಾವಿರಾರು ಸಾರಿಗೆ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳು ಈಡೇರಲೇ ಬೇಕು ಎಂದು ಆಗ್ರಹಿಸಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.
ಸಾರಿಗೆ ನೌಕರರಿಗೆ ಬೆಂಬಲವಾಗಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರೂ ಆಗಿರುವ ಐಪಿಎಸ್ ಮಾಜಿ ಅಧಿಕಾರಿ ಭಾಸ್ಕರ್ ರಾವ್ ಅವರು ಕೂಡ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಸರ್ಕಾರ ಪೂರೈಸಲೇ ಬೇಕು ಎಂದು ಆಗ್ರಹಿಸಿದ್ದು, ಸಿಎಂ ಅವರನ್ನು ಸ್ಥಳಕ್ಕೆ ಬಂದು ನೌಕರರು ಅಹವಾಲು ಸ್ವೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಟ್ಟಾರೆ ಉಪವಾಸ ಸತ್ಯಾಗ್ರಹ ನಿರತ ಸಾರಿಗೆ ನೌಕರರನ್ನು ಎಬ್ಬಿಸಿ ದರ್ಪ ಮೆರೆದಿದ್ದ ಸರ್ಕಾರ ತನ್ನ ಜವಾಬ್ದಾರಿ ಮರೆತು ಒಂದು ರೀತಿ ಉದ್ದಟತನದಿಂದ ವರ್ತಿಸಿದ್ದು ರಾಜ್ಯದ ಜನತೆಯ ಕಣ್ಣನ್ನು ಕೆಂಪಗಾಗಿಸಿದೆ. ಇನ್ನೊಂದೆಡೆ ನೌಕರರು ಕೂಡ ಸರ್ಕಾರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕದೆ ಬಿಸಿತುಪ್ಪ ಬಾಯಲ್ಲಿ ಇಟ್ಟುಕೊಂಡವರಂತೆ ಮೌನವಾಗಿದ್ದಾರೆ.
ಆದರೆ ಸರ್ಕಾರ ಈಗಲಾದರೂ ನೌಕರರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದೆ ನಡೆಯುವ ಹೋರಾಟಕ್ಕೆ ಸರ್ಕಾರ ಹೊಣೆ ಆಗಲಿದೆ ಎಂದು ಈಗಾಗಲೇ ಹಲವಾರು ಬಾರಿ ನೌಕರರು ಎಚ್ಚರಿಕೆ ನೀಡಿ ಡಿ.29ರವರೆಗೂ ಗಡುವಿ ನೀಡಿದ್ದಾರೆ.