ಬಳ್ಳಾರಿ: ನಗರದ 24ನೇ ವಾರ್ಡ್‌ನ ಗಿರಿನಗರದಲ್ಲಿ ಕಾಲುವೆ ಒತ್ತುವರಿಯಾಗಿದೆ ಎಂದು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದು, ಅಲ್ಲಿನ ನಿವಾಸಿಗಳು ಬೀದಿಗೆ ಬೀಳುವ ಆತಂಕದಲ್ಲಿದ್ದು, ಅವರಿಗೆ ಮನೆಗಳನ್ನು ತೆರವು ಮಾಡಲು ಐದು ದಿನ ಅವಕಾಶ ಕೊಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಬಳ್ಳಾರಿ ಜಿಲ್ಲಾಧ್ಯಕ್ಷ ಮಂಜುನಾಥ್ ಅಧಿಕಾರಿಗಳಿಗೆ ಮನವಿ ಮಾಡಿದರು.
ತೆರವು ಕಾರ್ಯಾಚರಣೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಮಂಜುನಾಥ್ ಸ್ಥಳೀಯರ ಕಷ್ಟಗಳನ್ನು ಆಲಿಸಿದರು. ಬಳಿಕ ಮಾತನಾಡಿ, ಅಧಿಕಾರಿಗಳು ಒಂದು ವಾರದ ಮುಂಚೆಯೇ ನೋಟಿಸ್ ನೀಡಿದ್ದಾರೆ. ಆದರೆ, ಇಲ್ಲಿನ ಮುಗ್ದಜನಗಳಿಗೆ ಕಾನೂನಿನ ಅರಿವು ಇಲ್ಲ.
ಈಗ ಅಧಿಕಾರಿಗಳು ತೆರವುಗೊಳಿಸಲು ಬಂದಿದ್ದು, ಜನ ಬೀದಿಗೆ ಬೀಳುವ ಭಯದಲ್ಲಿದ್ದಾರೆ, ಅವರು ಜಾಗವನ್ನು ತೆರವು ಮಾಡುತ್ತಾರೆ. ಆದರೆ, ಇನ್ನು ಐದು ದಿನ ಸಮಯ ಕೊಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಜನರು ಜಾಗವನ್ನು ಖಾಲಿ ಮಾಡಲ್ಲ ಎಂದು ಹೇಳುತ್ತಿಲ್ಲ. ಆದರೆ, ಅವರಿಗೆ ಯಾವ ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡುತ್ತಿದ್ದಾರೆ. ಶಾಸಕರು ಜಾಗ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ, ಅವರು ಸದ್ಯ ಊರಲ್ಲಿಲ್ಲ.
ಹೀಗಾಗಿ ಇವರಿಗೆ ಸಮಸ್ಯೆಯಾಗಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು, ಜಿಲ್ಲಾಡಳಿತ ಕೂಡಲೇ ಮನೆ ಕಳೆದುಕೊಳ್ಳುತ್ತಿರುವ ಬಡಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದರು.