
ಬೆಂಗಳೂರು ಗ್ರಾಮಾಂತರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಐದು ವಿದ್ಯಾರ್ಥಿಗಳನ್ನು ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ ಇಂದು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸನ್ಮಾನಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ನಂತರ ಸಿಇಒ ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿಯೂ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ, ಶಿಕ್ಷಕರ ಸಹಕಾರದಿಂದ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಲು ಸಾಧ್ಯವಾಗಿದೆ ಎಂದರು.
ಇನ್ನು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನಿಮ್ಮ ಈ ಸಾಧನೆಯು ಕಿರಿಯ ಸಹಪಾಠಿಗಳಿಗೂ ಮಾದರಿಯಾಗಲಿ. ಮುಂದಿನ ನಿಮ್ಮ ಉನ್ನತ ವಿದ್ಯಾಭ್ಯಾಸದಲ್ಲಿ ಕೂಡ ಇದೇ ರೀತಿಯ ಉತ್ತಮ ಅಂಕಗಳನ್ನು ಗಳಿಸಿ ಜಿಲ್ಲೆಗೆ, ಪೋಷಕರಿಗೆ ಒಳ್ಳೆಯ ಹೆಸರು ತರಬೇಕು. ಜೀವನದಲ್ಲಿ ಉತ್ತಮ ಗುರಿ ಅಳವಡಿಸಿಕೊಂಡು ಮುನ್ನಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಐವರು ವಿದ್ಯಾರ್ಥಿಗಳಿಗೆ ಸನ್ಮಾನ: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮೋಹನ್ ಜೆ.ಎಂ. ಅವರು 625 ಕ್ಕೆ 623 ಅಂಕ, ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಾದ ಐಶ್ವರ್ಯ 625 ಕ್ಕೆ 618 ಅಂಕ ಹಾಗೂ ನಿಶ್ಚಿತ ಆರ್ 625 ಕ್ಕೆ 617 ಅಂಕ ಪಡೆಯುವ ಮೂಲಕ ಕ್ರಮವಾಗಿ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯದ 22 ಟಾಪರ್ಸ್ ಗಳ ಪೈಕಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳಾದ ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯ ನೀಲಗಿರೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿ.ಭಾವನಾ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಮೇಳೆಕೋಟೆ ಕ್ರಾಸ್ ನ ಎಸ್.ಜೆ.ಸಿ.ಅರ್ ಪ್ರೌಢಶಾಲೆಯ ರಂಜಿತ ಎ.ಸಿ. ಅವರನ್ನು ಸನ್ಮಾನಿಸಲಾಯಿತು.
ಜಿ.ಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರರಾದ ಬೈಲಾಂಜನಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಟಿ.ಎಲ್.ಎಸ್ ಪ್ರೇಮ, ಜಿ.ಪಂ ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ, ವಿದ್ಯಾರ್ಥಿಗಳ ಪೋಷಕರು, ಸಿಬ್ಬಂದಿ ಉಪಸ್ಥಿತರಿದ್ದರು.
