ಬೆಂಗಳೂರು: ಹಾಲು ಉತ್ಪಾದಕ ರೈತರಿಗೆ ಕೊಡುತ್ತಿದ್ದ ಪ್ರೋತ್ಸಾಹ ಧನದಲ್ಲಿ 1.50 ರೂಪಾಯಿ ಕಡಿತಗೊಳಿಸಿ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟವು ಆದೇಶ ಹೊರಡಿಸಿದೆ.
ಈ ಹಿಂದೆ ಹಾಲು ಒಕ್ಕೂಟವು ಬೇಸಿಗೆ ಸಮಯದಲ್ಲಿ ಏ. 1ರಿಂದ ಮೇ. 31 ರವರೆಗೆ ಪ್ರತಿ ಲೀಟರ್ ಹಾಲಿಗೆ 2.85 ರೂ. ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು.
ಆ ಮೂಲಕ ಹೈನೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಅದರಲ್ಲಿ ಈಗ ಪ್ರತಿ ಲೀಟರ್ಗೆ 1.50 ರೂ. ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಸದ್ಯ, ಉತ್ತಮ ಮಳೆಯಾಗಿ ಹಸಿರು ಮೇವಿನ ಲಭ್ಯತೆ ಜಾಸ್ತಿಯಾಗಿದ್ದು, ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿದಿನ 13.50 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು, ಈಗ 16 ಲಕ್ಷ ಲೀಟರ್ಗೆ ತಲುಪಿದೆ.
ನಿತ್ಯ ಸುಮಾರು 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಹೀಗಾಗಿ ಪ್ರೋತ್ಸಾಹ ಧನ ಕಡಿತಗೊಳಿಸಿ ಆದೇಶ ಹೊರಡಿಸಿದೆ ಎಂದು ಹೇಳಲಾಗುತ್ತಿದೆ.