ಬೆಂಗಳೂರು: ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಕರ್ನಾಟಕ ರಾಜ್ಯಧಾನಿಯ ಏರ್ಪೋರ್ಟ್ ರಸ್ತೆಯ ಬ್ಯಾಟರಾಯನಪುರದಲ್ಲಿ ನಡೆದಿದೆ.
ಮಂಗಳೂರು ಮೂಲದ ವೃದ್ಧ ದಂಪತಿ ಕೊಲೆಯಾಗಿದ್ದು ಕೊಲೆಯ ಹಿಂದೆ ಯಾರ ಕೈವಾಡವಿದೆ ಎಂಬುವುದು ಪೊಲೀಸರ ವಿಚಾರಣೆ ಬಳಿಕವಷ್ಟೇ ತಿಳಿಯಬೇಕಿದೆ.
ಇನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಕರಣ ಬಯಲಿಗೆ ಬಂದಿದ್ದು, ವಿಷಯ ತಿಳಿದ ಕೂಡಲೇ ಕೊಡಿಗೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ವೃದ್ಧ ದಂಪತಿ ಸೈಟ್ ಖರೀದಿಸಿ ವಾಸವಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗ ತಿಂಡ್ಲು ಗ್ರಾಮದಲ್ಲಿ ವಾಸವಿದ್ದಾರೆ. ಕಿರಿಯ ಮಗ ತಂದೆ-ತಾಯಿ ಜತೆ ಇದ್ದ. ಕೊಲೆ ನಡೆದ ಬಳಿಕ ಕಿರಿಯ ಮಗ ಮನೆಯಲ್ಲಿ ಕಾಣಿಸುತಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಆಂಬ್ಯಲೆನ್ಸ್ ವಾಹನ ತರಿಸಿ, ಮೃತ ದಂಪತಿಯ ಮೃತ ದೇಹವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ.