ಜ.29ರಂದು ಜಂಟಿ ಕ್ರಿಯಾ ಸಮಿತಿಯಿಂದ ‘ಬೆಂಗಳೂರು ಚಲೋ’- ಭಾಗಿಯಾದರೆ ಸಾರಿಗೆ ನೌಕರರ ವಿರುದ್ಧ ಕ್ರಮ: ಎಂಡಿ ಅಕ್ರಮ್‌ಪಾಷ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜ.29 ರಂದು ‘ಬೆಂಗಳೂರು ಚಲೋ’ ಹಮ್ಮಿಕೊಂಡಿದ್ದು ಈ ಸಂಬಂಧ ನಿಗಮ ಎಲ್ಲ ಹಿರಿಯ, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಬೆಂಗಳೂರು ಮತ್ತು ಹಾಸನ ಪ್ರಾಂಶುಪಾಲರು ಮಾಲೂರು, ಮಳವಳ್ಳಿ ಹಾಸನ ಚಿಕ್ಕಮಗಳೂರು ಮತ್ತು ಹೊಳಲ್ಕೆರೆ ಕಾರ್ಯ ವ್ಯವಸ್ಥಾಪಕರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸಂಸ್ಥೆಯ ಎಂಡಿ ಆದೇಶ ಹೊರಡಿಸಿದ್ದಾರೆ.

ಇಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ಪಾಷ ಅವರು ಹೊರಡಿಸಿರುವ ಆದೇಶದಲ್ಲಿ ಹೋರಾಟಕ್ಕೆ ಕರೆಕೊಟ್ಟ ಸಂದರ್ಭಗಳಲ್ಲಿ ನೌಕರರು ತಮ್ಮ ದೈನಂದಿನ ಕರ್ತವ್ಯಕ್ಕೆ ಗೈರು ಹಾಜರಾದರೆ ಆಗ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ಸಾಮಾನ್ಯ ತತ್ವದನ್ವಯ ದಿನದ ವೇತನವನ್ನು ಕಡಿತಗೊಳಿಸುವುದರ ಜತೆಗೆ ಆಡಳಿತವರ್ಗವು ಅನಧಿಕೃತವಾಗಿ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬಹುದು ಎಂದು ರಾಜ್ಯ ಉಚ್ಚ ನ್ಯಾಯಾಲಯ ಆದೇಶಿಸಿದ್ದು, ಈ ವಿಷಯವನ್ನು ನೌಕರರ ಗಮನಕ್ಕೆ ಅವಶ್ಯ ತರಬೇಕು ಎಂದು ವಿಶೇಷ ಸೂಚನೆ ನೀಡಿದ್ದಾರೆ.
ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ 01.01.2020 ರಿಂದ 28.02.2023 ರ ವರೆಗಿನ ವೇತನ ಪರಿಷ್ಕರಣೆಯ 38 ತಿಂಗಳ ವೇತನ ಹಿಂಬಾಕಿ ಮತ್ತು 01.01.2024 ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದದ ಹಾಗೂ ಇತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ 29.01.2026 ರಂದು “ಬೆಂಗಳೂರು ಚಲೋ” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ನಿಗಮದ ನೌಕರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ನೌಕರರು ಪ್ರಚೋದಿಸುವಂತಿಲ್ಲ, ಬೆಂಬಲ ಸಹ ವ್ಯಕ್ತಪಡಿಸುವಂತಿಲ್ಲ:
1. ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಾಜ್ಯದ ಜನಸಾಮಾನ್ಯರಿಗೆ ಸಮರ್ವಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು ಅದಕ್ಕನುಗುಣವಾಗಿ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಕರ್ನಾಟಕ ಅಗತ್ಯ -2013 (Karnataka Act No-25/2015) 2 ಅಧಿಸೂಚನೆ ಹೊರಡಿಸಿದ್ದು ಅದರನ್ವಯ ರಸ್ತೆ ಸಾರಿಗೆ ನಿಗಮಗಳ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ ಮತ್ತು ಇತರೆ ಯಾವುದೇ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳು ನಿಗಮದ ನೌಕರರು ಮುಷ್ಕರ ಹೂಡುವಂತೆ ಪ್ರಚೋದಿಸುವಂತಿಲ್ಲ. ಹಾಗೂ ಬೆಂಬಲವನ್ನು ಸಹ ವ್ಯಕ್ತಪಡಿಸುವಂತಿಲ್ಲ.
2. ಅಲ್ಲದೇ, ಕರ್ನಾಟಕ ಸರ್ಕಾರವು ಎಲ್ಲ ನಾಲ್ಕೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು “ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂಬುದಾಗಿ ಸಹ ಘೋಷಿಸಿದೆ.
3. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನಿಗಮದ ನೌಕರರು ಯಾವುದೇ ಕಾರಣಕ್ಕೂ 29.01.2026 ರಂದು ‘ಬೆಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಮತ್ತು ತಮ್ಮ ದೈನಂದಿನ ಕರ್ತವ್ಯಕ್ಕೆ ಅವಶ್ಯ ಹಾಜರಾಗಿ, ರಾಜ್ಯದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಮನವಿ ಮಾಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಈ ನಿರ್ದೇಶನಗಳು:
1. 29.01.2026 ರಂದು ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
2. 29.01.2026 ರಂದು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು.
3. 29.01.2026 ರಂದು ಕೆಲಸಕ್ಕೆ ಗೈರು ಹಾಜರಾಗುವ ನೌಕರರ ವಿರುದ್ಧ “ಕೆಲಸ ಮಾಡದಿದ್ದಾಗ ವೇತನವಿಲ್ಲ” ಎಂಬ ತತ್ವದ ಪ್ರಕಾರ ಕ್ರಮ ಕೈಗೊಳ್ಳುವುದು.
4. ಈ ಸೂಚನೆಗಳು ವಾರದ ರಜೆ ಮತ್ತು ದೀರ್ಘಾವಧಿ ರಜೆಯಲ್ಲಿರುವ ನೌಕರರಿಗೆ ಅನ್ವಯಿಸುವುದಿಲ್ಲ. ಆದರೆ, ಅನಿವಾರ್ಯ ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ನೌಕರರ ವಾರದ ರಜೆಯನ್ನು ರದ್ದುಗೊಳಿಸಿ ಕರ್ತವ್ಯದ ಮೇಲೆ ನಿಯೋಜಿಸುವುದು.
5. 29.01.2026 ರಂದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ಪಟ್ಟಿಯಲ್ಲಿ ಘಟಕವಾರು/ ವರ್ಗಾವಾರು ಸಿದ್ಧಪಡಿಸಿ, ಮೇಲೆ ತಿಳಿಸಿರುವಂತೆ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ತತ್ವದನ್ವಯ ಕ್ರಮಕೈಗೊಳ್ಳಬೇಕು ಎಂದು ನಿಗಮ ಎಲ್ಲ ಹಿರಿಯ, ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಕಾರ್ಯ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ.
Related









