ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆ ತಗುಲುತ್ತಿರುವ ಕೊರೊನಾ ಸೋಂಕಿನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಶಿಕ್ಷಣ ಸಚಿವರ ವೇತನ ಕಡಿತ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಕೊರೊನಾ ಸೋಂಕು ಕೈ ಮೀರಿ ಹರಡುತ್ತಿರುವ ವೇಳೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಾಡಿನ ಶಿಕ್ಷಣ ತಜ್ಞರು, ಹೆಚ್ಚಿನ ಪಾಲಕರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಬೇಡ ಎಂದು ಸರ್ಕಾರಕ್ಕೆ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದರು. ಆದರೂ ಸ್ವಪ್ರತಿಷ್ಟೆಗೆ ಒಳಗಾಗಿ ಹಾಗೂ ಮೊಂಡತನದಿಂದ ವರ್ತಿಸಿದ ಶಿಕ್ಷಣ ಸಚಿವರು ಹಾಗೂ ರಾಜ್ಯ ಸರ್ಕಾರ ಪರೀಕ್ಷೆ ನಡೆಸುತ್ತಿದೆ ಎಂದು ಆರೋಪಿಸಿದೆ.
ಇಂದು ಹಾಸನ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ತಲಾ ಒಬ್ಬೊಬ್ಬ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಈ ಅವಘಡಕ್ಕೆ ಯಾರು ಹೊಣೆ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.
ನಮ್ಮ ಪಕ್ಷದ ನಿಯೋಗ ಶಿಕ್ಷಣ ಸಚಿವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಬದಲು ಇನ್ಯಾವ ಪರಿಹಾರ ಮಾರ್ಗಗಳನ್ನು ಅನುಸರಿಸಬಹುದು ಎಂದು ಚರ್ಚೆ ನಡೆಸಿತ್ತು. ಸೋಂಕು ಮಕ್ಕಳಿಗೆ ಹರಡಿದರೆ ಆಗುವ ಅಪಾಯಗಳ ಬಗ್ಗೆಯೂ ಎಚ್ಚರಿಕೆ ನೀಡಿತ್ತೂ, ಆದರೆ ಈಗ ಅವಘಡ ನಡೆದಿದೆ. ಆದ ಕಾರಣ ಈ ಕೂಡಲೇ ರಾಜ್ಯ ಸರ್ಕಾರ ಶಿಕ್ಷಣ ಸಚಿವರ ವೇತನದಿಂದ ಸೋಂಕಿತ ಮಕ್ಕಳ ಚಿಕಿತ್ಸಾ ವೆಚ್ಚ ಹಾಗೂ ಕ್ವಾರಂಟೈನ್ ಒಳಗಾಗಿರುವ ಶಿಕ್ಷಕರ ವೆಚ್ಚವನ್ನು ಪಡೆಯಬೇಕು ಎಂದು ಪಕ್ಷ ಆಗ್ರಹಿಸುತ್ತದೆ ಎಂದು ರಾಜ್ಯ ಮಾಧ್ಯಮ ಉಸ್ತುವಾರಿ ಜಗದೀಶ್ ವಿ.ಸದಂ ಹೇಳಿದ್ದಾರೆ.
ಸರ್ಕಾರದ ಹಾಗೂ ಶಿಕ್ಷಣ ಸಚಿವರ ಅವಸರದ ನಿರ್ಧಾರದಿಂದ ಆದ ಈ ತೊಂದರೆಗೆ ಇವರೆಲ್ಲರ ಚಿಕಿತ್ಸಾ ವೆಚ್ಚದ ಜತೆಗೆ ಸೋಂಕು ಇತರ ಮಕ್ಕಳಿಗೆ ಹರಡಿದ್ದೇ ಆದರೆ ಎಲ್ಲರ ಚಿಕಿತ್ಸಾ ವೆಚ್ಚವನ್ನು ವಸೂಲು ಮಾಡಬೇಕು ಹಾಗೂ ಸಚಿವರ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.