ಬೆಂಗಳೂರು: ಸದ್ಯಕ್ಕೆ ಬೆಂಗಳೂರನ್ನು ಲಾಕ್‌ಡೌನ್ ಮಾಡುವ ಮನಸ್ಥಿತಿಯಲ್ಲಿ ಸರ್ಕಾರ ಇಲ್ಲ. ಹೀಗಾಗಿ ಕಾಂಗ್ರೆಸ್ , ಜೆಡಿಎಸ್ ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಿ ಸಭೆಯಿಂದ ಹೊರನಡೆದಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸಿಎಂ ಕರೆದಿದ್ದ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಕುರಿತ ಸರ್ವಪಕ್ಷಗಳ ಜನಪ್ರತಿನಿಧಿಗಳ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಕರು ಬಳಿಕ ಸಭೆಯಿಂದ ಹೊರನಡೆದರು.
ಇನ್ನು ಸರ್ಕಾರ ಯಾವುದೇ ಕಾರಣಕ್ಕೂ ಬೆಂಗಳೂರನ್ನು ಲಾಕ್‌ಡೌನ್ ಮಾಡುವ ಸ್ಥಿತಿಯಲ್ಲಿ ಇಲ್ಲ ಕಾರಣ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸದ್ಯ ಬಾಧಿಸುತ್ತಿದ್ದು, ಅದನ್ನು ಸರಿದೂಗಿಸುವುದೇ ಕಷ್ಟವಾಗಿದೆ. ಇಂಥ ವಿಷಮ ಸ್ಥಿತಿಯಲ್ಲಿ ಲಾಕ್‌ಡೌನ್ ಮಾಡಿದರೆ ಜನರಿಗೆ ಬೇಕಾದ ನಿತ್ಯದ ವಸ್ತುಗಳನ್ನು ಕೊಡುವುದಕ್ಕೆ ಸರ್ಕಾರಕ್ಕೆ ಕಷ್ಟಸಾಧ್ಯವಾಗುವುದು.
ಹೀಗಾಗಿ ಲಾಕ್‌ಡೌನ್ ಮಾಡದೆಯೇ ರಾಜಧಾನಿಯಲ್ಲಿ ಕೊರೊನಾ ನಿಯಂತ್ರಣ ಹೇಗೆ ಸಾಧ್ಯ ಎಂಬುದನ್ನು ತಿಳಿಸಿ ಎಂದು ಶಾಸಕರನ್ನು ಸಿಎಂ ಕೇಳಿದ್ದಾರೆ ಎಂದು ಹೇಳಲಾಗಿದೆ. ಆದ್ದರಿಂದ ಶಾಸಕರು ತಮ್ಮ ಅಭಿಪ್ರಾಯವನ್ನಷ್ಟೇ ತಿಳಿಸಿ ಸಭೆಯಿಂದ ಹೊರನಡೆದಿದ್ದಾರೆ. ಇನ್ನು ಮುಂದಿನ ತೀರ್ಮಾನವನ್ನು ಸರ್ಕಾರ ಪ್ರಕಟಿಸಬೇಕಿದೆ.