ಬೆಂಗಳೂರು: ರಾಜ್ಯ ಸರ್ಕಾರ ಈ ಹಿಂದೆ ಜಾರಿಯಲ್ಲಿದ್ದ ಮೂರು ಜ್ಯೋತಿ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಿದೆ. ಇದರೊಂದಿಗೆ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಜ್ಯೋತಿಯ ಲಾಭ ದಕ್ಕಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೊಟ್ಟ ಮಾತಿನಂತೆ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಫ್ರೀ ನೀಡಲಾಗುತ್ತಿದೆ.
ಅದು ಕೂಡ ಇದೇ ಜುಲೈ 1ರಿಂದಲೇ ಜಾರಿಗೆ ಬಂದಿದೆ. ಆದರೆ ಈಗಾಗಲೇ ಜಾರಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳ ಭವಿಷ್ಯವೇನು, ಇದರ ಫಲಾನುಭವಿಗಳಿಗೆ ಏನಾಗುತ್ತೆ ಎಂಬ ಪ್ರಶ್ನೆಯ ಜತೆಗೆ ಗೊಂದಲ ಕಾಡುತ್ತಿತ್ತು. ಇದೀಗ ಇಂಧನ ಸಚಿವರು ವಿಶೇಷ ಕಾಳಜಿ ವಹಿಸಿ ಹೊಸ ಮಾರ್ಗಸೂಚಿಯನ್ನು ಹೊರಡಿಸುವ ಮೂಲಕ ಈ ಎಲ್ಲ ಫಲಾನುಭವಿಗಳಿಗೆ ಖುಷಿ ನೀಡಿದ್ದಾರೆ.
ಭಾಗ್ಯ ಜ್ಯೋತಿಗೆ ಈವರೆಗೆ 40 ಯೂನಿಟ್ ಫ್ರೀ ಇತ್ತು, ಅದನ್ನು ಈಗ 53 ಯೂನಿಟ್ ಹಾಗೂ ಶೇ.10 ಹೆಚ್ಚುವರಿ ಫ್ರೀ ಕರೆಂಟ್ ನೀಡುವುದಾಗಿ ಘೋಷಿಸಿದೆ. ಹಾಗೆಯೇ ಅಮೃತ ಜ್ಯೋತಿಗೆ 75 ಯೂನಿಟ್ ಇತ್ತು. ಈಗ ಅದನ್ನು 75 ಯೂನಿಟ್ ಜತೆಗೆ ಶೇ.10 ಮಾಡಿದ್ದಾರೆ. ಈ ಮೂಲಕ ಈಗ ಎಲ್ಲರೂ ಗೃಹಜ್ಯೋತಿ ವ್ಯಾಪ್ತಿಗೆ ಬರುತ್ತಾರೆ. ಅವರಿಗೆ ಹೆಚ್ಚುವರಿ ಯೂನಿಟ್‌ಗಳನ್ನು ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಮೂರು ಜ್ಯೋತಿಗಳ ಫಲಾನುಭವಿಗಳಲ್ಲಿ ಇದ್ದಂತಹ ಗೊಂದಲವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ನಿವಾರಿಸಿದ್ದಾರೆ. ಅಷ್ಟೇ ಅಲ್ಲ ಇವರಿಗೂ ಹೆಚ್ಚುವರಿ ಫ್ರೀ ಕರೆಂಟ್ ನೀಡುವ ಮೂಲಕ ರಾಜ್ಯ ಸರ್ಕಾರ ಬಡ ಕುಟುಂಬಗಳ ನೆರವಿಗೆ ನಿಂತಿದೆ. ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ಇದರಿಂದ ನೇರ ಲಾಭ ಸಿಗಲಿದೆ.
ಇನ್ನು ಇದರ ನಡುವೆ ನೀವು ಹೇಳಿದ್ದು ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಫ್ರೀ ಎಂದು ಹೇಳಿದ್ದೀರಿ ಅದರಂತೆ ನಡೆದುಕೊಳ್ಳಬೇಕು ಎಂದು ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲೂ ಆಗ್ರಹಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಅದನ್ನು ನಾವು ಕೊಡುವುದಿಲ್ಲ ಎಂಬಂತೆಯೇ ನಡೆದುಕೊಳ್ಳುತ್ತಿದೆ.