ನ್ಯೂಡೆಲ್ಲಿ: ಕರ್ನಾಟಕ ರಾಜ್ಯದ ಹೆಸರಾಂತ ರಂಗಭೂಮಿ – ಚಲನಚಿತ್ರ ಕಲಾವಿದ, ಮಾಜಿ ಶಾಸಕ ಹಾಗೂ ಹಿರಿಯ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಈವರೆಗೂ ಇದ್ದ ಪಕ್ಷದ ರಾಜ್ಯ ಘಟಕದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ರವರನ್ನು ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಈ ಹಿನ್ನೆಲಯಲ್ಲೆ ಅವರ ಸ್ಥಾನಕ್ಕೆ ಮುಖ್ಯಮಂತ್ರಿ ಚಂದ್ರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ತಿಳಿಸಿದ್ದಾರೆ.
ನಿನ್ನೆ (ಜು.12) ದೆಹಲಿಯಲ್ಲಿ ಘೋಷಣೆ ಮಾಡಿರುವ ಅವರು ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಬಿ.ಟಿ. ನಾಗಣ್ಣ ಹಾಗೂ ಅರ್ಜುನ್ ಪರಪ್ಪ ಹಲಗಿಗೌಡರ್ ಅವರನ್ನು ನೇಮಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಪಕ್ಷದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಅವರು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮ ವಹಿಸಿದ್ದಾರೆ. ಆದರೆ ಅವರು ನಿರೀಕ್ಷೆಸಿದಷ್ಟರ ಮಟ್ಟಕ್ಕೆ ಪಕ್ಷವನ್ನು ಸಂಘಟಿಸುವಲ್ಲಿ ಎಲ್ಲೋ ಸ್ವಲ್ಪ ಎಡವಿದಂತೆ ಕಾಣುತ್ತಿದೆ. ಅದಕ್ಕೆ ಕಾರಣ ಅವರಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡುವುದಕ್ಕೆ ಆಗದಿರುವುದು ಆಗಿರಬಹುದು.
ಒಟ್ಟಾರೆ ಪೃಥ್ವಿ ರೆಡ್ಡಿ ಅವರ ನೇತೃತ್ವದಲ್ಲಿ ಎಎಪಿ ರಾಜ್ಯದಲ್ಲಿ ಮನೆ ಮಾತಾಗಿರುವುದು ಸತ್ಯ. ಇನ್ನು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಈಗ ಮುಖ್ಯಮಂತ್ರಿ ಚಂದ್ರು ಅವರ ಹೆಗಲ ಮೇಲೆ ಬಿದ್ದಿದೆ. ಅದನ್ನು ನಿಭಾಯಿಸಿಕೊಂಡು ಹೋಗುವುದಕ್ಕೆ ಪಕ್ಷದ ಎಲ್ಲ ರಾಜ್ಯದ ಮುಖಂಡರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಿದೆ.
ಆ ನಿಟಿನಲ್ಲಿ ಶ್ರಮಿಸಿದರೆ ಪೃಥ್ವಿ ರೆಡ್ಡಿ ಪಕ್ಷ ಸಂಘಟನೆ ಮಾಡಿದ್ದು, ಅದನ್ನು ಮುಂದುವರಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಮುಖ್ಯಮಂತ್ರಿ ಚಂದ್ರು ಅವರದ್ದಾಗಲಿದೆ. ಈ ಎಲ್ಲದರ ನಡುವೆ ರಾಜ್ಯದಲ್ಲಿ ಎಎಪಿಯ ಹೊಸ ಅಲೆ ಮತ್ತೆ ಶುರುವಾಗುತ್ತಿರುವುದಂತು ಸುಳ್ಳಲ್ಲ.