CRIMENEWSಬೆಂಗಳೂರು

BMTC ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ಬಂದಿದ್ದೀಯಾ ಎಂದು ಚಾಲಕನ ಮೇಲೆ ಬೈಕ್‌ ಸವಾರ ಹಲ್ಲೆ- ಆರೋಪಿ ಬಂಧನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ಏಕೆ ಬಂದಿದ್ದೀಯಾ ಎಂದು ಪ್ರಶ್ನಿಸಿ ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಬಸ್‌ ಚಾಲಕರ ಮೇಲೆ ದ್ವಿಚಕ್ರ ವಾಹನ ಸವಾರ ಹಲ್ಲೆ ಮಾಡಿರುವ ಘಟನೆ ಭಾರತಿ ಸಿಟಿ ಸಿಗ್ನಲ್ ಬಳಿ ನಡೆದಿದೆ.

ಬಿಎಂಟಿಸಿ ಚಾಲಕ ಸಂತೋಷ್ ಹಲ್ಲೆಗೆ ಒಳಗಾದವರು. ಸಂತೋಷ್ ಅವರ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಪೊಲೀಸರು, ಹೆಗಡೆ ನಗರ ಸಮೀಪದ ನೂರ್ ನಗರದ ನಿವಾಸಿ ಬೈಕ್‌ ಸವಾರ ಅಪ್ಸಲ್ ಎಂಬಾತನನ್ನು ಬಂಧಿಸಿದ್ದಾರೆ.

ಬಿಎಂಟಿಸಿ ಘಟಕ -11ರ ಚಾಲಕ ಕಂ ನಿರ್ವಾಹಕ ಸಂತೋಷ್ ಅವರು ಶುಕ್ರವಾರ ರಾತ್ರಿ 8.30ರ ವೇಳೆ ಹೆಗಡೆ ನಗರ ಮಾರ್ಗವಾಗಿ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಸಮೀಪದ ನಿಲ್ದಾಣದಲ್ಲಿ ಬಸ್‌ ನಿಲುಗಡೆ ಮಾಡದೆ ಮುಂದೆ ಹೋಗಿ ನಿಲ್ಲಿಸಿದ್ದೀಯಾ ಎಂದು ಭಾರತಿ ಸಿಟಿ ಸಿಗ್ನಲ್ ಬಳಿ ಬಸ್ ಅಡ್ಡಗಟ್ಟಿದ ಆರೋಪಿ, ಬಸ್ ನಿಲ್ದಾಣದಲ್ಲಿ ಏಕೆ ನಿಲ್ಲಿಸಲಿಲ್ಲ ಎಂದು ಜಗಳವಾಡಿ ಹಲ್ಲೆ ಮಾಡಿದ್ದಾನೆ.

ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಕ್ರೋಶಗೊಂಡ ಅಪ್ಸಲ್ ಕರ್ತವ್ಯನಿರತ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಚಾಲಕ ಬಸ್ ಸಮೇತ ಠಾಣೆಗೆ ತೆರಳಿ ದೂರು ನೀಡಿದ್ದರು.

22 ವರ್ಷ ಆರೋಪಿ ಅಪ್ಸಲ್ ತಾನು ಮದುವೆಯಾಗುವ ಹುಡುಗಿಯನ್ನು ಬಸ್ ಹತ್ತಿಸಲು ಬೈಕ್‌ನಲ್ಲಿ ಕರೆದುಕೊಂಡು ಬಂದು ಬಸ್‌ಗಾಗಿ ಕಾಯುತ್ತಿದ್ದರು. ಆದರೆ, ಚಾಲಕ ಬಸ್ ನಿಲ್ಲಿಸದೆ ಹೋಗಿದ್ದಾರೆ ಎಂದು ಆಕ್ರೋಶಗೊಂಡು ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!