CRIMENEWSನಮ್ಮರಾಜ್ಯ

ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರಗೊಳಿಸಿ ಪೊಲೀಸರಿಂದ ಹಲ್ಲೆ- ಇಲ್ಲ ಆಕೆಯೇ ಪೊಲೀಸರಿಗೆ ಕಚ್ಚಿದ್ದಾಳೆ ಎಂದ ಆಯುಕ್ತರು

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟಿದೆ ಎಂದು ಗಲಾಟೆ ಮಾಡಿದ್ದ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಜೆಪಿ ಕಾರ್ಯಕರ್ತೆ ಸುಜಾತಾ ಎಂಬುವವರು ಗಾಯಗೊಂಡಿದ್ದು, ಈಗ ಘಟನೆ ಕುರಿತ ವಿಡಿಯೋ ವೈರಲ್‌ ಆಗಿದೆ. ಇತ್ತೀಚೆಗೆ ಕೇಶ್ವಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿದ ಅಧಿಕಾರಿಗಳು ಲೋಪವೆಸಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತೆ ಸುಜಾತಾ ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲಿಟ್‌ ಮಾಡಲಾಗಿದೆ ಎಂದು ಅವರು ಪೊಲೀಸ್‌‍ ಠಾಣೆಗೆ ದೂರು ನೀಡಲು ಹೋದಾಗ ಕಾಂಗ್ರೆಸ್‌‍ನ ನಗರಸಭಾ ಸದಸ್ಯೆ ಸುವರ್ಣ ಅವರು ಗಲಾಟೆ ಮಾಡಿದ್ದಾರೆ ಎಂದು ಪ್ರತಿದೂರು ನೀಡಿದ್ದರು. ಈ ಸಂಬಂಧ ಕಾಂಗ್ರೆಸ್‌‍ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹಗ್ಗ-ಜಗ್ಗಾಟ ನಡೆದು ದೂರು-ಪ್ರತಿದೂರಿನಿಂದ ಹುಬ್ಬಳ್ಳಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಈ ನಡುವೆ ಸುಜಾತಾ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಅವರನ್ನು ಪೊಲೀಸರು ಬಂಧಿಸಲು ಮುಂದಾದಾಗ ಹೈಡ್ರಾಮಾ ನಡೆದಿತ್ತು. ಈ ವೇಳೆ ಅವರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದಂತೆ ಇಂದು ನಗರ ಪೊಲೀಸ್‌‍ ಆಯುಕ್ತ ಶಶಿಕುಮಾರ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪೊಲೀಸರು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಸುಜಾತಾ ಅವರೇ ವಿವಸ್ತ್ರಗೊಂಡಿದ್ದಾರೆ ಮತ್ತು ನಮ್ಮ ಪೊಲೀಸ್‌‍ ಸಿಬ್ಬಂದಿಗೆ ಕಚ್ಚಿದ್ದಾರೆ ಎಂದು ಹೇಳಿದ್ದಾರೆ.

ಆಕೆಯೇ ಬಟ್ಟೆ ಬಿಚ್ಚಿ ಸೀನ್ ಕ್ರಿಯೇಟ್ ಮಾಡಿದ್ದಾಳೆ: ಪೊಲೀಸ್ ಆಯುಕ್ತ: ಹುಬ್ಬಳ್ಳಿಯ ಕೇಶವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತೆಯ ಬಟ್ಟೆ ಬಿಚ್ಚಿ ಪೊಲೀಸರು ಥಳಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಈ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿರುವ ಹುಬ್ಬಳ್ಳಿ ಪೊಲೀಸ್ ಆಯುಕ್ತ ಶಶಿಕುಮಾರ್, ಮಹಿಳೆಯೇ ಬಟ್ಟೆ ಬಿಚ್ಚಿ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಆಕೆಯ ವಿರುದ್ಧ 9 ಪ್ರಕರಣಗಳು ಇವೆ ಎಂದು ತಿಳಿಸಿದ್ದಾರೆ.

ಬಂಧಿತ ಮಹಿಳೆ ವಿರುದ್ಧ 2020ರಿಂದಲೂ ಐದು ಪ್ರಕರಣಗಳು ದಾಖಲಾಗಿವೆ. ಈ ವರ್ಷ ನಾಲ್ಕು ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಈ ಹಿಂದಿನ ಪ್ರಕರಣಗಳಲ್ಲಿ ಮಹಿಳೆಯ ನಡವಳಿಕೆ ಬಗ್ಗೆ ಮಾಹಿತಿ ಇದ್ದ ಕೇಶವಾಪುರ ಪೊಲೀಸರು ಮಹಿಳೆಯನ್ನು ಬಂಧಿಸಲು ಹೆಚ್ಚುವರಿ ಮಹಿಳಾ ಸಿಬ್ಬಂದಿಯನ್ನು ಕರೆಸಿಕೊಂಡಿದ್ದರು. ಪೊಲೀಸರು ವಶಕ್ಕೆ ಪಡೆದು ಬಂಧಿಸುವಾಗ ಆಕೆ ಬೆತ್ತಲೆಯಾಗಿರಲಿಲ್ಲ. ವ್ಯಾನ್ ಹತ್ತಿದ ಬಳಿಕ ಆಕೆಯೇ ಬಟ್ಟೆ ಬಿಚ್ಚಿದ್ದಾಳೆ. ಮಹಿಳಾ ಹಾಗೂ ಪುರುಷ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಹೇಳಿದರು.

ಮತಪಟ್ಟಿ ಪರಿಷ್ಕರಣೆಗೆ ಹೋದಾಗ ಸ್ಥಳೀಯರ ನಡುವೆ ಸಂಘರ್ಷ ಗಲಾಟೆ ನಡೆದಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ ನಂತರ ದೂರು ದಾಖಲಾಗಿದೆ. ಸ್ಥಳೀಯರಾದ ಪ್ರಶಾಂತ್ ಬಬ್ಬಾಗಿ ಅವರು ನೀಡಿರುವ ದೂರನ್ನಾಧರಿಸಿ ಕೇಶವಾಪುರ ಪೊಲೀಸರು ದಾಖಲಿಸಿ ಪ್ರಮುಖ ಆರೋಪಿಯಾಗಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರಿಗೆ ಕತ್ತು ಹಿಸಕಲು ಹೋಗಿದ್ದು, ಖಾಸಗಿ ಅಂಗಕ್ಕೆ ಹೊಡೆದಿದ್ದು ಸಾಕ್ಷ್ಯ ಸಿಕ್ಕಿದ ಮೇಲೆ ಬಂಧಿಸಲಾಗಿದೆ ಎಂದು ಹೇಳಿದರು.

ಮಹಿಳೆಯನ್ನು ವ್ಯಾನ್ ಒಳಗೆ ಹತ್ತಿಸುತ್ತಿದ್ದಂತೆಯೇ ಆಕೆ ಖುದ್ದಾಗಿ ಬಟ್ಟೆ ಬಿಚ್ಚಿದ್ದಾಳೆ. ಅಲ್ಲದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ. ಕಲಾವತಿ ಚಂದಾವರ್ಕರ್, ಶಕುಂತಲಾ, ರೇಖಾ ಮತ್ತು ಮಾರ್ಗರೆಟ್ ಎಂಬ ಸಿಬ್ಬಂದಿಗಳಿಗೆ ಕಚ್ಚಿ ಘಾಸಿಗೊಳಿಸಿದ್ದಾಳೆ . ಓರ್ವ ಸಿಬ್ಬಂದಿಗೆ ಹೊಟ್ಟೆ ಭಾಗಕ್ಕೆ ರಕ್ತ ಬರುವಂತೆ ಕಚ್ಚಿದ್ದಾಳೆ. ಆದರೆ ಈ ವಿಡಿಯೋವನ್ನು ಯಾರು ವೈರಲ್ ಮಾಡಿದ್ದಾರೋ ಗೊತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಒಂದು ವೇಳೆ ಪೊಲೀಸರು ಆ ರೀತಿ ನಡೆದುಕೊಂಡಿದ್ದರೆ ನ್ಯಾಯಾಧೀಶರ ಮುಂದೆ ಹೇಳಲು ಅವಕಾಶವಿತ್ತು. ಆದರೆ ಆಕೆ ಏನು ಹೇಳಲಿಲ್ಲ. ಬಟ್ಟೆ ಬಿಚ್ಚಿದ್ದಾಗ ಪೊಲೀಸರೆ ಸ್ಥಳೀಯರ ಸಹಾಯದಿಂದ ಆಕೆಗೆ ಬೇರೆ ಬಟ್ಟೆ ಹಾಕಿಸಿದ್ದಾರೆ ಎಂದು ಆಯುಕ್ತ ಶಶಿಕುಮಾರ್ ತಿಳಿಸಿದರು.

Megha
the authorMegha

Leave a Reply

error: Content is protected !!