ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 17 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು, ಬಿಎಂಟಿಸಿಯ ಹಿಂದಿನ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕವಾನ್ ಅವರನ್ನು ಬಂಧಿಸಿದ್ದಾರೆ.
ಬಿಎಂಟಿಸಿ ಶಾಂತಿನಗರ ಕಚೇರಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಈ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕವಾನ್ ಈಗಾಗಲೇ ಕಂಬಿ ಎಣಿಸುತ್ತಿದ್ದು, ಉಳಿದ ಇನ್ನಾರು ಮಂದಿ ಅಧಿಕಾರಿಗಳಾ ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್. ಮುದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಬಿ.ಕೆ. ಮಮತಾ, ಮೇಲ್ವಿಚಾರಕಿ ಟಿ. ಅನಿತಾ, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ, ಸಹಾಯಕ ಸಂಚಾರ ನಿರೀಕ್ಷಕಿ ಗುಣಶೀಲಾ, ಕಿರಿಯ ಸಹಾಯಕ ಕೆ. ವೆಂಕಟೇಶ್ ಅವರು ಬಂಧನನ ಭೀತಿಯಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ವಕೀಲರನ್ನು ಭೇಟಿ ಮಾಡಿದ್ದು ನಿರೀಕ್ಷಣ ಜಾಮೀನಿಗೆ ಅರ್ಜಿಹಾಕಿದ್ದಾರೆ. ಅದರಲ್ಲಿ ಎರಡನೇ ಮುಖ್ಯ ಆರೋಪಿಯಾದ ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್. ಮುದ್ದೋಡಿ ಅವರು ವಕೀಲ ಎಚ್.ಬಿ.ಶಿವರಾಜು ಅವರ ಮೂಲಕ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮತ್ತು ಹೈ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿಹಾಕಿದ್ದಾರೆ.
ಈ ಹಿಂದೆ ಇದೇ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದು, ಈಗಾಗಲೇ ಆ ಸಂಬಂಧ ಜಾಮೀನು ಮಂಜೂರಾಗಿದೆ. ಆದರೆ, ಕಳೆದ ಸೆ.30ರಂದು ಮತ್ತೊಂದು ಎಫ್‌ಐಆರ್ ದಾಖಲಾಗಿದ್ದು, ಇದು 17 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದಾಖಲಿಸಿರುವ ಎಫ್‌ಐಆರ್ ಆಗಿದೆ.
ಈ ಎಫ್‌ಐಆರ್ ದಾಖಲಾಗುತ್ತಿದಂತೆ ಶ್ರೀರಾಮ್ ಮುಲ್ಕವಾನ್ ಅವರನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೂ ಬಲೆ ಬೀಸಿದ್ದಾರೆ. ಹೀಗಾಗಿ ಶ್ರೀರಾಮ್ ಮುಲ್ಕವಾನ್ ಸೇರಿದಂತೆ 7 ಮಂದಿ ಆರೋಪಿಗಳು ನಿರೀಕ್ಷಣ ಜಾಮೀನಿಗಾಗಿ ಅರ್ಜಿಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಾಳೆ (ಅ.7) ಶನಿವಾರ ಸಿಟಿ ಸಿವಿಲ್ ನ್ಯಾಯಾಲಯದ 67ನೇ ಕೋರ್ಟ್ ಹಾಲ್‌ನಲ್ಲಿ ನಡೆಯಲಿದೆ.
ಈ ವೇಳೆ ಆರೋಪಿ ಪರ ವಕೀಲರು ಮತ್ತು ಸರ್ಕಾರಿ ಪರ ವಕೀಲರು ವಾದ – ಪ್ರತಿವಾದವನ್ನು ಮಂಡಿಸಲಿದ್ದು, ಇದು ಭಾರಿ ಕುತೂಹಲಕಾರಿಯಾಗಿರಲಿದೆ. ಈಗಾಗಲೇ ಈ ಆರೋಪಿಗಳ ವಿರುದ್ಧ ದಾಕಲಾಗಿರುವ 3 ಎಫ್‌ಐಆರ್‌ಗಳಲ್ಲಿ ಎರಡಕ್ಕೆ ಜಾಮೀನು ಮಂಜೂರಾಗಿದೆ. ಆದರೆ, ಇದು 17 ಕೋಟಿ ರೂ. ಹಗರಣದ ಪ್ರಕರಣವಾಗಿರುವುದರಿಂದ ಸರ್ಕಾರಿ ಅಭಿಯೋಜಕರು ಮತ್ತು ಆರೋಪಿಗಳ ಪರ ವಕೀಲರು ಯಾವ ರೀತಿ ವಾದ ಪ್ರತಿವಾದ ಮಂಡಿಸಲಿದ್ದಾರೆ ಎಂಬುವುದರ ಬಗ್ಗೆ ಭಾರಿ ಕುತೂಹಲ ಮೂಡಿಸುತ್ತಿದೆ.
ಇನ್ನು ಆರೋಪಿಗಳಲ್ಲಿ ಎರಡನೆಯವರಾದ ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್. ಮುದ್ದೋಡಿ ಅವರ ಪರ ವಕೀಲ ಎಚ್.ಬಿ.ಶಿವರಾಜು ಅವರು ವಾದ ಮಂಡಿಸಲಿದ್ದು, 17 ಕೋಟಿ ರೂ.ಆರೋಪ ಎದುರಿಸುತ್ತಿರುವ ಇವರ ಹಿಂದೆ ಯಾರಾರು ಇದ್ದಾರೆ ಎಂಬುವುದು ಹೊರಬರಬೇಕು. ಅದು ಹೊರಬರದೆ ಹೋದರೆ ನಿಜವಾದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವವರು ಎಂಬ ನಿಟ್ಟಿನಲ್ಲಿ ವಾದ ಮಂಡನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಬಿಎಂಟಿಸಿಯಲ್ಲಿ ಇದೇ ಮೊದಲ ಬಾರಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಸಂಸ್ಥೆಯ ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದ್ದು, ತಪ್ಪಿತಸ್ಥ ಅಧಿಕಾರಿಗಳಿಗೆ ಯಾವರೀತಿ ಶಿಕ್ಷೆಯಾಗಬೇಕು ಎಂದರೆ, ಸಂಸ್ಥೆಯಲ್ಲಿ ಭ್ರಷ್ಟಚಾರ ಎಸಗುವ ಬಗ್ಗೆ ಕನಸ್ಸಿನಲ್ಲೂ ಕಾಣಬಾರದು ಆರೀತಿ ಶಿಕ್ಷೆಯಾಗಬೇಕು ಎಂದು ಸಂಸ್ಥೆಯ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳೇ ಹೇಳುತ್ತಿದ್ದಾರೆ.
ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಎಗ್ಗಿಲ್ಲದೆ ಭ್ರಷ್ಟಚಾರ ಅದರಲ್ಲೂ ಚಾಲನಾ ಸಿಬ್ಬಂದಿಗಳಿಂದಲೇ ಅಂದರೆ ಸಂಸ್ಥೆಯ ನೌಕರರಿಂದಲೇ ಲಂಚ ಪಡೆಯುವ ಕೆಟ್ಟ ಹುಳುಗಳು ಸಂಸ್ಥೆಯಲ್ಲಿ ಶೇ.90ರಷ್ಟು ತುಂಬಿಹೋಗಿವೆ. ಇವುಗಳನ್ನು ಕಾನೂನ ಅಸ್ತ್ರದಿಂದಲೇ ಶಿಕ್ಷಿಸಬೇಕು ಎಂದು ಪ್ರಾಮಾಣಿಕ ಅಧಿಕಾರಿಗಳು ಪ್ರಾರ್ಥಿಸುತ್ತಿದ್ದಾರೆ.
ಈ ಎಲ್ಲದರ ನಡುವೆ ನಾಳೆ ಶನಿವಾರ ಸಿಟಿ ಸಿವಿಲ್ ನ್ಯಾಯಾಲಯದ 67 ಕೋರ್ಟ್‌ಹಾಲ್‌ನಲ್ಲಿ ನಡೆಯುವ ನಿರೀಕ್ಷಣ ಜಾಮೀನು ಅರ್ಜಿ ವಿಚಾರಣೆಯಲ್ಲಿನ ವಾದ ವಿವಾದವನ್ನು ಆಲಿಸಲು ಮಾಧ್ಯಮಗಳು ಸೇರಿದಂತೆ ಹಲವರು ಕೋರ್ಟ್‌ಗೆ ಹಾಜರಾಗುತ್ತಿದ್ದಾರೆ. ಹೀಗಾಗಿ ಈ 17 ಕೋಟಿ ರೂ. ಹಗರಣದ ವಾದ ವಿವಾದ ಭಾರಿ ಕುತೂಹಲ ಮೂಡಿಸಲಿದ್ದು, ಈ 7 ಮಂದಿ ಆರೋಪಿಗಳಿಗೆ ಜಾಮೀನು ಸಿಗುವುದೋ ಇಲ್ಲವೂ ಎಂಬುವುದು ಕೂಡ ಕುತೂಹಲವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ.
ಆರೋಪವೇನು?: 2020ರ ಮಾರ್ಚ್ ಹಾಗೂ 2023ರ ಅಕ್ಟೋಬರ್ ನಡುವಣ ಅವಧಿಯಲ್ಲಿ ಬಿಎಂಟಿಸಿ ಡಿಪೋಗಳಲ್ಲಿ ವಾಣಿಜ್ಯ ಮಳಿಗೆಗಳ ಟೆಂಡರ್, ಸ್ವಚ್ಛತಾ ನಿರ್ವಹಣೆ ಟೆಂಡರ್ ನೀಡಿಕೆಯಲ್ಲಿ ಹಿರಿಯ ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿ ವಂಚನೆ ಎಸಗಲಾಗಿತ್ತು. ಈ ಕುರಿತು ಬಿಎಂಟಿಸಿ ವಿಚಕ್ಷಣಾ ದಳ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಪ್ರಮುಖ ಆರೋಪಿ ಶ್ರೀರಾಮ್ ಮುಲ್ಕವಾನ್‌ರನ್ನು ಬಂಧಿಸಲಾಗಿದೆ. ಕೇಸ್‌ನಲ್ಲಿ ಭಾಗಿಯಾಗಿರುವ ಆರು ಮಂದಿ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ.
ಬಿಎಂಟಿಸಿಗೆ ಸೇರಿದ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ರಿಯಾಯಿತಿ ನೀಡುವ ಸಂಬಂಧ ಕಡತ ತಯಾರಿಸಿ ಮಳಿಗೆ ಮಾಲೀಕರಿಗೆ ಅವಕಾಶ ಕಲ್ಪಿಸುವ ಸುತ್ತೋಲೆ ಹೊರಡಿಸಲಾಗಿತ್ತು. ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡಬಹುದು ಎಂದು ನಕಲಿ ಟಿಪ್ಪಣಿ ತಯಾರಿಸಲಾಗಿತ್ತು. ಈ ಕಡತಗಳಿಗೆ ಬಿಎಂಟಿಸಿ ಜಾಗೃತ ದಳದ ನಿರ್ದೇಶಕ ಕೆ.ಅರುಣ್, ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿ ನಮೂದಿಸಲಾಗಿತ್ತು. ಪರಿಣಾಮ ಬಿಎಂಟಿಸಿಗೆ ಮೊದಲ ಬಾರಿಗೆ 10. 50 ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಿತ್ತು. ಮತ್ತೊಂದು ವಂಚನೆ ಪ್ರಕರಣದಲ್ಲಿ 6.91 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಾಗಿದೆ.
ಯಶವಂತಪುರ ಟಿಟಿಎಂಸಿಯ ಸ್ವಚ್ಛತಾ ನಿರ್ವಹಣೆ ಮಾಡುತ್ತಿದ್ದ ಶ್ರೀ ಲಕ್ಷ್ಮೀ ಎಂಟರ್‌ಪ್ರೈಸಸ್‌ಗೆ ಟೆಂಡರ್ ಅವಧಿ ಮುಕ್ತಾಯಗೊಂಡ ಬಳಿಕವೂ ಉನ್ನತ ಅಧಿಕಾರಿಗಳ ಅನುಮತಿ ಇಲ್ಲದೆ ಟೆಂಡರ್ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಇದರಿಂದಲೂ ಸಂಸ್ಥೆಯ ಬೊಕ್ಕಸಕ್ಕೆ ನಷ್ಟವಾಗಿದೆ ಎಂಬ ಆರೋಪದಡಿ ಮೂರನೇ ಬಾರಿಗೆ ಈ 7 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬಯಲಾಗಿದ್ದು ಹೇಗೆ? ಬಿಎಂಟಿಸಿಗೆ ಕೋಟ್ಯಂತರ ರೂ. ಆರ್ಥಿಕ ನಷ್ಟದ ಕುರಿತು ವಿಚಕ್ಷಣಾ ದಳ ಆಂತರಿಕ ತನಿಖೆ ನಡೆಸಿದ ವೇಳೆ ಸಂಸ್ಥೆಯ ಎಂಡಿ ಸೇರಿದಂತೆ ಉನ್ನತ ಅಧಿಕಾರಿಗಳ ನಕಲಿ ಸಹಿ ಬಳಸಿ ಮೂರು ಪ್ರತ್ಯೇಕ ಕಡತಗಳನ್ನು ಸೃಷ್ಟಿಸಿರುವುದು ಕಂಡು ಬಂದಿತ್ತು. ಈ ಕಡತಗಳ ಒಡಲು ಬಗೆದಾಗ ಆಡಳಿತ ಕಚೇರಿಯಲ್ಲಿ ಏಳು ಮಂದಿ ಅಧಿಕಾರಿಗಳು ಮೂರು ವರ್ಷಗಳ ಅವಧಿಯಲ್ಲಿ ನಡೆಸಿದ್ದ 17 ಕೋಟಿ ರೂ. ವಂಚನೆ ಗೋಲ್ ಮಾಲ್ ಬಯಲಾಗಿತ್ತು. ಅದರಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಎಫ್‌ಐಆರ್ ದಾಖಲಿಸಲಾಗಿದೆ.