BMTC: ಆಧಾರ್ ಕಾರ್ಡ್ ಮನೆಲಿದೆ ಸುಮ್ಮನೆ ಟಿಕೆಟ್‌ಕೊಡು ಎಂದ ಮಹಿಳೆ ಪರ ನಿಂತು ನಿರ್ವಾಹಕನ ಮೇಲೆ ಪುಂಡ ವಕೀಲ & ಗ್ಯಾಂಗ್‌ನಿಂದ ಹಲ್ಲೆ-FIR ದಾಖಲು

- ಅಲ್ಲದೆ ಫೋನ್‌ಮಾಡಿ ಸಂಬಂಧಿಕರಿಬ್ಬರನ್ನು ಪೊಲೀಸ್ ಠಾಣೆ ಬಳಿ ಕರೆಸಿಕೊಂಡು ಅವರಿಂದಲೂ ಹೊಡೆಸಿದ ನ್ಯಾಯವಾದಿ- ಆರೋಪ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈಶಾನ್ಯ ವಲಯ ಬಿಎಂಟಿಸಿ 48ನೇ ಡಿಪೋ (ಭೈರತಿಬಂಡೆ) ನಿರ್ವಾಹಕ ಈರಪ್ಪ ಯಡ್ರಾಮಿ ಅವರ ಮೇಲೆ ಉಚಿತ ಟಿಕೆಟ್ ಸಂಬಂಧ ವಕೀಲ ಸೇರಿ ಮೂವರು ಕಿಡಿಗೇಡಿಗಳು ಬಸ್‌ನಲ್ಲೇ ಹಲ್ಲೆ ಮಾಡಿದ್ದು, ಹಲ್ಲೆಯಿಂದ ಪ್ರಜ್ಞೆತಪ್ಪಿ ಬಿದ್ದಿದ್ದ ನಿರ್ವಾಹಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ನಿರ್ವಾಹಕ ಈರಪ್ಪ ಯಡ್ರಾಮಿ ಅವರ ಕಿವಿಗೆ ಬಲವಾದ ಪೆಟ್ಟುಬಿದ್ದಿದೆ. ಇದರಿಂದ ಜ್ಞಾನತಪ್ಪಿ ಬಿದ್ದಿದ್ದ ಅವರನ್ನು ಸಹೋದ್ಯೋಗಿ ಚಾಲಕ ಮೊಹಿನುದ್ದೀನ್ ಅವರು ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಮಂಗಳವಾರ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಂಪುರ ಮಾರ್ಗದಲ್ಲಿ ಡ್ಯೂಟಿಯಲ್ಲಿದ್ದ ನಿರ್ವಾಹಕ ಈರಪ್ಪ ಯಡ್ರಾಮಿ ಅವರನ್ನು ಶಕ್ತಿ ಯೋಜನೆಯ ಉಚಿತ ಟಿಕೆಟ್ ಕೊಡುವಂತೆ ಮಹಿಳೆಯೊಬ್ಬರು ಕೇಳಿದ್ದಾರೆ. ಆಗ ನಿಮ್ಮ ಆಧಾರ್ ಕಾರ್ಡ್ ಕೊಡಿಯಮ್ಮ ಎಂದು ಕೇಳಿದಾಗ ಆ ಮಹಿಳೆ ಆಧಾರ್ ಕಾರ್ಡ್ ಮನೆಯಲ್ಲಿದೆ ಅದೆಲ್ಲ ಏಕೆ ನನಗೆ ಉಚಿತ ಟಿಕೆಟ್ ಕೊಡು ಎಂದು ದಮ್ಕಿ ಹಾಕಿದ್ದಾರೆ.
ಆದರೂ ನಿರ್ವಾಹಕರು ಹೀಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಮುಂದೆ ತನಿಖಾಧಿಕಾರಿಗಳು ಬಂದಾಗ ನಾನು ಅವರಿಗೆ ಉತ್ತರ ಕೊಡಬೇಕಾಗುತ್ತದೆ ಎಂದು ಎಷ್ಟೇ ತಿಳಿ ಹೇಳಿದರು ಕೂಡ ಅವರು ಕೇಳಲಿಲ್ಲ. ಇದಕ್ಕೆ ಕೆಲ ಪ್ರಯಾಣಿಕರು ನಿಮಗೆ ಏನ್ರೀ ಅವರು ಕನ್ನಡದಲ್ಲಿ ಮಾತನಾಡುತ್ತಿದ್ದಾರಲ್ಲ ಉಚಿತ ಟಿಕೆಟ್ ಕೊಡಿ ಎಂದು ನಿರ್ವಾಹಕರನ್ನೇ ತರಾಟೆಗೆ ತೆದುಕೊಂಡಿದ್ದಾರೆ.
ಆಗ ನಿರ್ವಾಹಕರು ಇದು ಸಾಧ್ಯವಿಲ್ಲ ಎಂದು ಹೇಳಿದರೂ ಕೂಡ ಕೇಳಲಿಲ್ಲ. ಈ ನಡುವೆ ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ವಕೀಲ ಮಹಾಶಯ ನನಗೆ ನಿಮ್ಮಿಬ್ಬರ ಗಲಾಟೆಯಿಂದ ಕಿರಿಕಿರಿಯಾಗುತ್ತಿದೆ, ಉಚಿತ ಟಿಕೆಟ್‌ಕೊಟ್ಟರೆ ನಿನ್ನಪ್ಪನಗಂಟು ಹೋಗುತ್ತದೆಯೇ ಎಂದು ಹೇಳಿ ನಿರ್ವಾಹಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಅಲ್ಲದೆ ಸಂಬಂಧಿಕರನ್ನು ಫೋನ್‌ಮಾಡಿ ಕರೆಸಿಕೊಂಡು ಪೊಲೀಸ್‌ಠಾಣೆ ಬಳಿಯೂ ತನ್ನ ಮತ್ತಿಬ್ಬರು ಸಂಬಂಧಿಕರೊಂದಿಗೆ ಸೇರಿ ತೀವ್ರ ಹಲ್ಲೆ ಮಾಡಿದ್ದಾನೆ. ಈ ಹಲ್ಲೆ ಮಾಡಿರುವುದು ಕೊತ್ತನೂರು ಪೊಲೀಸ್ ಠಾಣೆಯ ಸಿಸಿಟಿವಿಯಲ್ಲೂ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ಪುಂಡ ವಕೀಲ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲು: ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈರಪ್ಪ ಯಡ್ರಾಮಿ ಅವರು ಆಸ್ಪತ್ರೆಯಿಂದಲೇ ದೂರು ನೀಡಿದ್ದು, ನಾನು 17.02.2026 ರಂದು ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ಈ ದಿನ ಮಧ್ಯಾಹ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಂಪುರಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಉಚಿತ ಟಿಕೆಟ್ ಕೊಡುವಂತೆ ಕೇಳಿದರು. ಆಗ ನಾನು ಗುರುತಿನ ಚೀಟಿ ತೋರಿಸುವಂತೆ ಕೇಳಿದೆ. ಅವರು ಗುರುತಿನ ಚೀಟಿ ತೋರಿಸಲಿಲ್ಲ. ಆಗ ಬಸ್‌ನಲ್ಲಿ ಇದ್ದ ಇತರ ಮಹಿಳಾ ಪ್ರಯಾಣಿಕರು ಕೂಡ ಸರ್ಕಾರ ನಿಗದಿ ಮಾಡಿರುವ ಗುರುತಿನ ಚೀಟಿ ತೋರಿಸಿ ಟಿಕೆಟ್ ಪಡೆಯುವಂತೆ ಹೇಳಿದರು.
ಈ ವೇಳೆ ನಮ್ಮ ಬಸ್‌ನಲ್ಲೇ ಪ್ರಯಾಣ ಮಾಡುತ್ತಿದ, ಕಪ್ಪುಕೋಟ್ ಧರಿಸಿದ್ದ ವ್ಯಕ್ತಿಯೊಬ್ಬ ಆಕೆ ಕೇಳುತ್ತಿರುವ ಟಿಕೆಟ್‌ಕೊಡು ಎಂದು ಏರುಧ್ವನಿಯಲ್ಲಿ ಅವಾಚ್ಯ ಪದಬಳಕೆ ಮಾಡಿ ಬೈಯ್ದರು. ಆಗ ನಾನು ಸರ್ಕಾರ ನಿಗದಿ ಮಾಡಿರುವ ಗುರುತಿನ ಚೀಟಿ ತೋರಿಸದೇ ಟಿಕೆಟ್ ಕೊಡಲು ಬರುವುದಿಲ್ಲ ಎಂದು ಹೇಳಿದೆ. ಜತೆಗೆ ಕಪ್ಪು ಶೂಟ್ ಧರಿಸಿದ ವ್ಯಕ್ತಿಗೆ ನೀವು ಸುಮ್ಮನಿರಿ ಎಂದು ಮನವಿ ಮಾಡಿದೆ.
ಆಗ ಆ ವ್ಯಕ್ತಿ ನನಗೆ ಮುಚ್ಚಿಕೊಂಡು ಹೋಗಲೇ ಎಂದು ಅವಾಚ್ಯ ಶಬ್ದಗಳಿಂದ ಬೈಯು ನಿ*ಮ್ಮನ್ ಹೋಗಲೇ ಎಂದು ಬೈದರು. ನಂತರ ನನ್ನ ಕುತ್ತಿಗೆ ಪಟ್ಟಿ ಹಿಡಿದು ಮುಖಕ್ಕೆ ಕೈಗಳಿಂದ ಹೊಡೆದು ಕಾಲಿನಿಂದ ನನಗೆ ಒದ್ದರು. ನಂತರ ನಾನು ಮತ್ತು ಬಸ್ ಚಾಲಕ ಮೊಹಿನುದ್ದೀನ್ ಇಬ್ಬರು ಸೇರಿಕೊಂಡು ಕೊತ್ತನೂರು ಪೊಲೀಸ್ ಠಾಣೆಗೆ ಕರೆತರುವಾಗ, ಕೊತ್ತನೂರು ಪೊಲೀಸ್ ಠಾಣೆಯ ಹತ್ತಿರ ಕಪ್ಪು ಶೂಟ್ ಧರಿಸಿದ ವ್ಯಕ್ತಿಯ ಸಂಬಂಧಿಕರಿಬ್ಬರು ಬಂದು ಏಕಾಏಕಿ ಹಿಂದಿನಿಂದ ಬಲವಾಗಿ ನನ್ನ ಬಲ ಕಿವಿಗೆ ಹೊಡೆದರು. ಅವರು ಹೊಡೆದ ರಭಸಕ್ಕೆ ನಾನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದೆ. ನಂತರ ಸ್ಥಳದಲ್ಲಿದ ಚಾಲಕ ಮೊಹಿನಿದ್ದೀನ್ ಅವರು ನನ್ನನ್ನು ಕೂಡಲೇ ಸನ್ ಸೈನ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಹೀಗಾಗಿ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಹಲ್ಲೆ ಮಾಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಪ್ಪು ಶೂಟ್ ಧರಿಸಿದ ವ್ಯಕ್ತಿ ಮತ್ತು ಆತನ ಸಂಬಂಧಿಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ನನಗೆ ನ್ಯಾಯಕೊಡಿಸಬೇಕು ಎಂದು ಈರಪ್ಪ ಯಡ್ರಾಮಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇತ್ತ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಹಲ್ಲೆ ಮಾಡಿದ ವಕೀಲನ ಸಂಬಂಧಿ ಒಬ್ಬನನ್ನು ಬಂಧಿಸಿದ್ದು, ವಕೀಲ ಸೇರಿದಂತೆ ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.
Related









