ಬೆಂಗಳೂರು: ತಾಯಿ ತನ್ನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಸ್ಕೂಟರ್‌ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬಾಲಕಿಯೊಬ್ಬಳು ಮೃತಪಟ್ಟು, ತಾಯಿ-ಮಗನಿಗೆ ಗಾಯವಾಗಿರುವ ದಾರುಣ ಘಟನೆ ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಕೆ.ಆರ್. ಪುರಂನ ಹಳೆ ಮದ್ರಾಸ್ ರಸ್ತೆಯಲ್ಲಿ ಅವಘಡ ಸಂಭವಿಸಿದ ಪರಿಣಾಮ 16 ವರ್ಷದ ಬಾಲಕಿ ಲಯಶ್ರೀ ವಿ. ಮೃತಪಟ್ಟಿದ್ದು, ಘಟನೆಯಲ್ಲಿ ಬಾಲಕಿ ಸಹೋದರ ಯಶ್ವಿನ್ (11) ಮತ್ತು ತಾಯಿ ಪ್ರಿಯದರ್ಶಿನಿಗೆ (45) ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಿಯದರ್ಶಿನಿ ಅವರು ತಮ್ಮ ಇಬ್ಬರು ಮಕ್ಕಳಾದ ಲಯಶ್ರೀ ಮತ್ತು ಯಶ್ವಿನ್ ಅವರನ್ನು ಸ್ಕೂಟರ್‌ನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದಾಗ ಬೆಳಗ್ಗೆ 7.30 ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಳೇ ಮದ್ರಾಸ್ ರಸ್ತೆಯಲ್ಲಿ, ಸರ್ವಿಸ್ ರಸ್ತೆಯಿಂದ ಭಟ್ಟರಹಳ್ಳಿ ತಲುಪಲು ಬಲ ತಿರುವು ತೆಗೆದುಕೊಂಡಾಗ ಹಿಂದಿನಿಂದ ಬಿಎಂಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಪ್ರಿಯದರ್ಶಿನಿ ಮತ್ತು ಯಶ್ವಿನ್ ಅವರ ಎಡಭಾಗಕ್ಕೆ ಬಿದ್ದರೆ, ಲಯಶ್ರೀ ಬಲಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ, ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಬಸ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕ ಮಹೇಂದ್ರನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಕೆಆರ್ ಪುರಂ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಘಟನೆ ಹೇಗಾಯ್ತು ?: ಎಚ್‌ಎಎಲ್ ಉದ್ಯೋಗಿ ವೆಂಕಟಾಚಲ ಅವರು, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಸಿಗೇಹಳ್ಳಿಯಲ್ಲಿ ನೆಲೆಸಿದ್ದರು. ನಾಗವಾರಪಾಳ್ಯ ಸಮೀಪದ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ಲಯಶ್ರೀ ಹಾಗೂ 6ನೇ ತರಗತಿಯಲ್ಲಿ ಯಶ್ವಿನ್ ಓದುತ್ತಿದ್ದರು. ಪ್ರತಿ ದಿನ ಮಕ್ಕಳನ್ನು ಶಾಲೆಗೆ ಬಿಟ್ಟು ಮತ್ತೆ ಸಂಜೆ ಅವರ ತಾಯಿಯೇ ಸ್ಕೂಟರ್‌ನಲ್ಲಿ ಕರೆದುಕೊಂಡು ಬರುತ್ತಿದ್ದರು.
ಎಂದಿನಂತೆ ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಶಾಲೆಗೆ ಬಿಡಲು ಮಕ್ಕಳನ್ನು ಕರೆದುಕೊಂಡು ಪ್ರಿಯದರ್ಶಿನಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಅದೇ ವೇಳೆ ಹೊಸಕೋಟೆಗೆ ಬಿಎಂಟಿಸಿ ತೆರಳುತ್ತಿತ್ತು. ಮಾರ್ಗಮಧ್ಯೆ ಪ್ರಿಯದರ್ಶನಿ ಅವರಿಗೆ ಟಿ.ಸಿ.ಪಾಳ್ಯ ಹತ್ತಿರ ಹೊಸಕೋಟೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಎದುರಾಗಿದೆ. ಕೂಡಲೇ ಅವರು ಬ್ರೇಕ್ ಹಾಕಿದ್ದರಿಂದ ಸ್ಕೂಟರ್‌ಗೆ ಬಸ್ ಡಿಕ್ಕಿಯಾಗಿದೆ.
ಈ ಹಂತದಲ್ಲಿ ಕೆಳಗೆ ಬಿದ್ದ ತಾಯಿ ಹಾಗೂ ಮಕ್ಕಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಲಯಶ್ರೀ ಕೊನೆಯುಸಿರೆಳೆದಿದ್ದಾಳೆ. ಗಾಯಾಳು ತಾಯಿ-ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.