ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಜಯನಗರ 4ನೇ ಘಟಕದ ನಿರ್ವಾಹಕಿ ಮುತ್ತುಕುಮಾರಿ (42) ಇಂದು ಬೆಳಗ್ಗೆ ನಿಧನರಾದರು.
ಕಳೆದ ಕೆಲ ದಿನಗಳ ಹಿಂದೆ ಜಯನಗರದ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ನಂತರ ಮನೆಯಲ್ಲೇ ಐಸೋಲೇಶನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಉಂಟಾದ್ದರಿಂದ ಸಮೀಪದ ಖಾಸಗಿ ಕ್ಲಿನಿಕ್‌ಗೆ ಕರೆದುಕೊಂಡು ಹೋದಾಗ ಪಲ್ಸ್ ರೆಟ್ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೂಡಲೇ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತಿ, ಓರ್ವ ಪುತ್ರ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕನಕಪುರ ತಾಲೂಕಿನ ಹೂಕುಂದ ಗ್ರಾಮದಲ್ಲಿ ಇಂದು ಸಂಜೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕರಾರಸಾ ನೌಕರರ ಕೂಟದ ಪದಾಧಿಕಾರಿಗಳ ಸಂತಾಪ
ಮೃತರು ಇತ್ತೀಚೆಗೆ ನಡೆದ ಸಾರಿಗೆ ನೌಕರರ ಮುಷ್ಕರದಲ್ಲಿ ಮುಂಚೂಣಿಯಲಿದ್ದು, ಕರಾರಸಾ ನೌಕರರ ಕೂಟದ ಸದಸ್ಯರಾಗಿ ಹಾಗೂ ಮಹಿಳಾ ನೌಕರರಿಗೆ ಧೈರ್ಯ ತುಂಬಿ ನೌಕರರ ಪರವಾಗಿ ಹೋರಾಟ ಮಾಡಿದ್ದರು.
ಇವರ ಅಗಲಿಕೆ ನಮ್ಮ ಸಂಘಟನೆ ಹಾಗೂ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ. ಕಳೆದ ಮುಷ್ಕರದಲ್ಲೂ ಸಹ ಬಹಳ ಸಕ್ರಿಯವಾಗಿ ಪಾಲ್ಗೊಂಡು ಕಾರ್ಮಿಕರ ಏಳಿಗೆಗಾಗಿ ಶ್ರಮಿಸಿದ ಅಕ್ಕ ಇನ್ನಿಲ್ಲ ಎಂಬುದು ಬೇಸರದ ಸಂಗತಿ. ಇವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಮೃತರ ಕುಟುಂಬದವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡಲೆಂದು ಪ್ರಾರ್ಥಿಸುತ್ತೇವೆ ಎಂದು ಕೂಟದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.