ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಎಲೆಕ್ಟ್ರಿಕ್ ಬಸ್ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎಲೆಕ್ಟ್ರಿಕ್ ಬಸ್ ಕಂಡಕ್ಟರ್ ಸೇರಿ 8 ಮಂದಿ ಗಾಯಗೊಂಡಿರುವ ಘಟನೆ ಕೋನಪ್ಪನ ಅಗ್ರಹಾರ ಬಳಿ ನಡೆದಿದೆ.
ಇಂದು (ಮೇ 26) ಬೆಳಗ್ಗೆ 8.30ರ ಸುಮಾರಿಗೆ ಪಿಇಎಸ್ ಕಾಲೇಜು ಬಳಿ ಹೋಗುತ್ತಿದ್ದಾಗ ರಸ್ತೆ ಹಂಪ್ ಇರುವುದರಿಂದ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಘಟಕ -38ರ ಬಸ್ ಚಾಲಕ ಬ್ರೇಕ್ ಹಾಕಿದ್ದಾರೆ. ಈ ವೇಳೆ ಅತಿ ವೇಗವಾಗಿ ಹಿಂದಿನಿಂದ ಬಂದ ಡಿಪೋ-3ರ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬಸ್‌ಗೆ ಡಿಕ್ಕಿ ಹೊಡದಿದೆ.
ಈ ವೇಳೆ ಎಲೆಕ್ಟ್ರಿಕ್ ಬಸ್ ಮುಂದಿನ ಭಾಗ ಜಖಂಗೊಂಡಿದ್ದು, ಕಂಡಕ್ಟರ್ ಸೇರಿ 6 ಮಂದಿಗೆ ಸಣ್ಣಪುಟ್ಟಗಾಯಗಳಾಗಿವೆ. ಇನ್ನು ಮುಂದೆ ಹೋಗುತ್ತಿದ್ದ 38ನೇ ಘಟಕದ ಬಸ್ ಹಿಂದಿನ ಭಾಗ ಜಖಂಗೊಂಡಿದ್ದು, ಹಿಂದಿನ ಸೀಟ್‌ನಲ್ಲಿ ಕುಳಿತ್ತಿದ್ದ ಇಬ್ಬರಿಗೆ ಗಾಯವಾಗಿದೆ. ಅವರಲ್ಲಿ ಒಬ್ಬರಿಗೆ ದವಡೆಗೆ ತೀವ್ರ ಪೆಟ್ಟಾಗಿದ್ದು ಮತ್ತೊಬ್ಬರ ತಲೆಗೆ ರಾಡ್ ಹೊಡೆದು ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಕಳೆದ ಕೆಲ ದಿನಗಳ ಹಿಂದೆ ಎಲೆಕ್ಟ್ರಿಕ್ ಬಸ್ ಚಾಲಕರು ಸರಿಯಾಗಿ ವೇತನ ಕೊಡುತ್ತಿಲ್ಲ ಎಂದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಸುಮಾರು 60 ಮಂದಿ ಚಾಲಕರು ಕೆಲಸ ಬಿಟ್ಟು ಹೋಗಿದ್ದಾರೆ. ಹೀಗಾಗಿ ಹೆವಿ ಡಿಎಲ್ ಹೊಂದಿರುವವರು ಯಾರೆ ಸಿಕ್ಕರು ಅವರನ್ನು ಕರೆತಂದು ಬಸ್ಸನ್ನು ಕೊಡುತ್ತಿದ್ದಾರೆ. ಪರಿಣಾಮ ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ ಎಂದು ಘಟಕದ ಸಿಬ್ಬಂದಿಯೇ ಹೇಳುತ್ತಿದ್ದಾರೆ.
ಇನ್ನು ಇಂದು ಅಪಘಾತವೆಸಗಿದ ಚಾಲಕನ ಬಗ್ಗೆ ಸರಿಯಾಗಿ ಮಾಹಿತಿ ಸಿಕ್ಕಿಲ್ಲ. ಬಸ್ ಅಪಘಾತವಾಗುತ್ತಿದ್ದಂತೆ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ಸರಿಯಾಗಿ ವೇತನಕೊಟ್ಟಿದ್ದರೆ ಒಂದು ಹಂತದವರೆಗೆ ಬಸ್ ಓಡಿಸುವುದಕ್ಕೆ ಕಲಿತಿದ್ದ ಚಾಲಕರು ಕೆಲಸ ಬಿಟ್ಟು ಹೋಗುತ್ತಿರಲಿಲ್ಲ.
ಹೀಗಾಗಿ ಬಸ್ ನಿಂತಲೆ ನಿಂತರೆ ಎಲ್ಲಿ ತೊಂದರೆ ಆಗುತ್ತದೋ ಎಂದು ಹೆದರಿ, ಬಿಟ್ಟುಹೋಗುತ್ತಿರುವ ಚಾಲಕರ ಜಾಗಕ್ಕೆ ತರಬೇತಿಯೇ ಇಲ್ಲದ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಕಿಲೋ ಮೀಟರ್ ರೀಚ್ ಮಾಡುವುದಕ್ಕೆ ತಾಕೀತು ಮಾಡುತ್ತಿರುವುದರಿಂದ ಇಂಥ ಅನಾಹುತಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಒಟ್ಟಾರೆ ಬಸ್ ಓಡಿಸುವ ಬಗ್ಗೆ ತರಬೇತಿ ನೀಡದೆಯೇ ಹೆವಿ ಡಿಎಲ್ ಇರುವವರ ಕೈಗೆ ಬಸ್ ಕೊಟ್ಟು ಜನರ ಪ್ರಾಣದ ಜತೆ ಎಲೆಕ್ಟ್ರಿಕ್ ಬಸ್ ಗುತ್ತಿಗೆ ಪಡೆದಿರುವವರು ಮತ್ತು ಬಿಎಂಟಿಸಿ ನಿಗಮದ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಇವರ ಈ ನಡೆಯಿಂದ ಸಾರ್ವಜನಿಕರು ಇನ್ನೆಷ್ಟು ತೊಂದರೆ ಅನುಭವಿಸಬೇಕೋ ಗೊತ್ತಿಲ್ಲ.