ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರೊಬ್ಬರು ಬಸ್ ಚಲಾಯಿಸುತ್ತಿದ್ದಾಗ ಅನಾರೋಗ್ಯಕ್ಕೀಡಾದ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ ಬಂದ ಸಹಾಯಕ ಪೊಲೀಸ್ ಆಯುಕ್ತ ರಾಮಚಂದ್ರ ಅವರು ಚಾಲಕನನ್ನು ಆಸ್ಪತ್ರೆಗೆ ಕಳುಹಿಸಿ ಸ್ವತಃ ತಾವೇ ಬಸ್ ಚಾಲನೆ ಮಾಡಿ ಕರ್ತವ್ಯ ಪ್ರಜ್ಞೆ ಜತೆಗೆ ಮಾನವೀಯತೆಯನ್ನು ಮೆರೆದಿದ್ದಾರೆ.
ಶಿವಾಜಿನಗರ-ಕಾಡುಗೋಡಿ ಮಾರ್ಗವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಚಾಲಕನಿಗೆ ಮಾರ್ಗ ಮಧ್ಯೆದಲ್ಲಿಯೇ ಅನ್ಯಾರೋಗ್ಯ ಉಂಟಾಗಿದೆ. ಇದರಿಂದ ಬಸ್ ಚಾಲನೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಚಾಲಕ ತಲುಪಿದ್ದಾರೆ. ಹೀಗಾಗಿ ಚಾಲಕ ಓಲ್ಡ್ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ಬಸ್ ನಿಲ್ಲಿಸಿದ.
ನಗರಕ್ಕೆ ವಿವಿಐಪಿಗಳ ಆಗಮನ ಹಿನ್ನೆಲೆ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ಎಸಿಪಿ ರಾಮಚಂದ್ರ ಅವರು ಭದ್ರತೆಗೆ ನಿಯೋಜನೆಗೊಂಡಿದ್ದರು. ಈ ವೇಳೆ ರಸ್ತೆ ಮಧ್ಯ ನಿಂತಿದ್ದ ಬಿಎಂಟಿಸಿ ಬಸ್ ಅನ್ನು ಸುಮಾರು ಒಂದು ಕಿಮೀ ದೂರದ ಬಸ್ ನಿಲ್ದಾಣದವರೆಗೆ ಸ್ವತಃ ಚಾಲನೆ ಮಾಡಿಕೊಂಡೆ ಹೋಗಿದ್ದಾರೆ.
ಇದಕ್ಕೂ ಮುನ್ನ ಬಸ್ ಚಾಲಕನನ್ನು ಆಂಬುಲೆನ್ಸ್ ಮೂಲಕ ಬೌರಿಂಗ್ ಆಸ್ಪತ್ರೆಗೆ ಎಸಿಪಿ ರಾಮಚಂದ್ರ ಅವರು ರವಾನಿಸಿದ್ದಾರೆ. ಎಸಿಪಿ, ಬಸ್ ಚಾಲನೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಯಾಣಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು ಬಿಎಂಟಿಸಿ ಸಂಸ್ಥೆಯಲ್ಲಿ ಚಾಲಕ ಮತ್ತು ನಿರ್ವಾಹಕರ ಕೊರತೆ ಹೆಚ್ಚಾಗಿದೆ. ಇದರಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ಚಾಲನಾ ಸಿಬ್ಬಂದಿಗಳಿಗೆ ರಜೆ ಸಿಗುತ್ತಿಲ್ಲ. ಒಂದು ವೇಳೆ ಆರೋಗ್ಯ ಸರಿಯಿಲ್ಲ ಎಂದು ಒಂದೇಒಂದು ದಿನ ರಜೆ ತೆಗೆದುಕೊಂಡರೆ, ಅಂಥ ಚಾಲನಾ ಸಿಬ್ಬಂದಿಗೆ ಗೈರು ಹಾಜರಿ ತೋರಿಸುತ್ತಾರೆ. ಜತೆಗೆ ವಾರದ ರಜೆಯನ್ನು ಕೊಡುವುದಿಲ್ಲ.
ಇಂಥ ಪರಿಸ್ಥಿತಿಯಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಬಳಲುತ್ತಿದ್ದಾರೆ. ಒಂದು ದಿನ ರಜೆ ತೆಗೆದುಕೊಂಡರೆ ಅದನ್ನು ಗೈರು ಹಾಜರಿ ಎಂದು ತೋರಿಸಿ ವಾರದ ರಜೆಯನ್ನು ಕಟ್ಟು ಮಾಡವ ಈ ಕಾನೂನು ಬಾಹಿರ ಪದ್ಧತಿ ನಿಗಮಗಳಲ್ಲಿ ಏಕೆ ಅಳವಡಿಸಿಕೊಂಡಿದ್ದಾರೆ ಎಂಬುವುದು ಗೊತ್ತಿಲ್ಲ.
ಇನ್ನು ಇದನ್ನು ಕೇಳಬೇಕಾದ ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ನಿಗಮದಲ್ಲೇ ಇರುವ ಕಾರ್ಮಿಕ ಕಲ್ಯಾಣಾಧಿಕಾರಿಗಳು ಜಾಣ ಮೌನ ವಹಿಸಿರುವುದು ಏತಕ್ಕೆ ಎಂಬುವುದು ತಿಳಿಯದಾಗಿದೆ. ಇಲ್ಲಿ ಚಾಲನಾ ಸಿಬ್ಬಂದಿಗಳಿಗೆ ಮಾತ್ರ ಈ ರೀತಿಯ ಕಾನೂನು ಬಾಹಿರ ನಿಯಮವನ್ನು ಜಾರಿಗೆ ತಂದಿರುವ ಅಧಿಕಾರಿಗಳಿಗೆ ಸಾಮಾನ್ಯ ಪರಿಜ್ಞಾನವಿಲ್ಲವೆ?
ಇನ್ನಾದರೂ ಇಂಥ ನಿಮ್ಮ ಸಂವಿಧಾನ ನೀಡಿರುವ ಹಕ್ಕನ್ನೆ ಕಸಿದುಕೊಳ್ಳುವ ನಿಮ್ಮ ಈ ನಿಯಮಗಳನ್ನು ಕೂಡಲೇ ವಾಪಸ್ ಪಡೆದು ಪ್ರತಿಯೊಬ್ಬ ನೌಕರರಿಗೂ ಸಿಗಬೇಕಿರುವ ಕಾನೂನು ಬದ್ದ ರಜೆ, ಇತರ ಸೌಲಭ್ಯಗಳನ್ನು ನೀಡುವತ್ತ ಮುಂದಾಗಿ. ಈ ರೀತಿ ದೌರ್ಜನ್ಯದ ಕಾನೂನುಗಳಿಂದ ಮುಂದಿನ ದಿನಗಳಲ್ಲಿ ಘರ್ಷಣೆಗೆ ಕಾರಣವಾಗಬಹುದು ಎಚ್ಚರ ಎಂದು ಪ್ರಜ್ಞಾವಂತರು ಸಲಹೆ ನೀಡಿದ್ದಾರೆ.