ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರಿಗೆ ಗನ್ ಲೈಸನ್ಸ್ ಪಡೆಯಲು ಅನುಮತಿ ನೀಡಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಚಾಲಕ ಕಂ ನಿರ್ವಾಹಕ ಯೋಗೇಶ್ ಗೌಡ ಎಂಬುವರು ಮನವಿ ಮಾಡಿದ್ದಾರೆ.,
ಈ ಸಂಬಂಧ ಇಂದು ಎಂಡಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಈ ವಿಷಯದ ಬಗ್ಗೆ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಪ್ರತಿ ದಿನ 24 ಗಂಟೆ ತಮ್ಮ ಜೀವದ ಹಂಗು ತೊರೆದು ಬೃಹತ್ ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಯಲ್ಲಿ ಹಾಗೂ ಕಲುಷಿತ ವಾಯುಮಾಲಿನ್ಯದ ನಡುವೆಯೇ ನಿರಂತರ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಇನ್ನು ಈ ಎಲ್ಲದರ ನಡುವೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಆದರೆ ಸಂಚಾರ ದಟ್ಟಣೆಯ ವಾಹನ ಸವಾರರ ಹಾಗೂ ಬಸ್ಸಿನ ಪ್ರಯಾಣಿಕರ ಜತೆಯಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಗಲಾಟೆಯಾಗಿ ಅವರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವುದು ಸರ್ವೆ ಸಮಾನ್ಯವಾಗಿದೆ.
ಸಂಸ್ಥೆಯ ಕನ್ನಡಿಗರ ನೌಕರರು ಅನ್ಯ ರಾಜ್ಯದ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗುತ್ತಿದ್ದಾರೆ. ಉದಾಹಣೆಗೆ 01/10/2024 ರಂದು ಬಿಎಂಟಿಸಿ ಘಟಕ-13ರ ನಿರ್ವಾಹಕರಿಗೆ ಮಾರಣಾಂತಿಕ ಹಲ್ಲೆ ನಡೆದ ಘಟನೆಯೇ ಸಾಕ್ಷಿ. ಆದ್ದರಿಂದ ಚಾಲನಾ ಸಿಬ್ಬಂದಿಗಳ ಜೀವ ರಕ್ಷಣೆಗಾಗಿ ಗನ್ ಲೈಸನ್ಸ್ ಪಡೆಲು ಅನುಮತಿ ಕೊಡಿಸಬೇಕಾಗಿ ಸಮಸ್ತ ಸಾರಿಗೆ ಸಂಸ್ಥೆಯ ನೌಕರರ ಪರವಾಗಿ ತಮ್ಮಲ್ಲಿ ಮನವಿಮಾಡಿಕೊಳ್ಳುತ್ತಿದ್ದೇನೆ ಎಂದು ಯೋಗೇಶ್ ಗೌಡ ವಿನಂತಿಸಿದ್ದಾರೆ.
ಚಾಲಕ ಕಂ ನಿರ್ವಾಹಕ ಯೋಗೇಶ್ ಗೌಡ ಅವರ ಮನವಿಯನ್ನು ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸ್ವೀಕರಿಸಿದೆ. ಆದರೆ ಈ ಬಗ್ಗೆ ಇನ್ನು ಯಾವುದೆ ಮಾಹಿತಿ ತಿಳಿದು ಬಂದಿಲ್ಲ. ಇನ್ನು ಚಾಲನಾ ಸಿಬ್ಬಂದಿಗಳ ಮೇಲೆ ಆಗುತ್ತಿರುವ ಹಲ್ಲೆಗಳನ್ನು ನೋಡಿದರೆ ಯೋಗೇಶ್ ಗೌಡ ಕೇಳಿರುವುದು ಸರಿಯಾಗಿದೆ ಎಂದು ನೌಕರರು ಹೇಳುತ್ತಿದ್ದಾರೆ.