NEWSನಮ್ಮಜಿಲ್ಲೆನಮ್ಮರಾಜ್ಯ

BMTC: ನೌಕರರು ವಾರದ ರಜೆ ತೆಗೆದುಕೊಳ್ಳಲು 6 ದಿನ ಕೆಲಸ ಮಾಡಬೇಕೆಂಬ ಆದೇಶ ಮಾಡಿಲ್ಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ಕಾರದ ಅಧೀನದಲ್ಲಿರುವ ರಾಜ್ಯದ ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಒಂದಿಲ್ಲೊಂದು ಕಿರುಕುಳ ಕೊಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಲಜ್ಜೆಗೆಟ್ಟ ಅಧಿಕಾರಿಗಳು. ಇನ್ನು ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿದ ಕೂಡಲೇ ಧ್ವನಿ ಎತ್ತಬೇಕಾದ ನೌಕರರ ಪರ ಸಂಘಟನೆಗಳ ಮುಖಂಡರು ಯಾರಕಿಸೆ ನೋಡುತ್ತಿದ್ದಾರೋ ಗೊತ್ತಿಲ್ಲ.

ಹೌದು! ನೌಕರರು ವಾರದ ರಜೆ ತೆಗೆದುಕೊಳ್ಳಬೇಕು ಎಂದರೆ 6 ದಿನ ಕಡ್ಡಾಯವಾಗಿ ಡ್ಯೂಟಿ ಮಾಡಿರಬೇಕು ಎಂದು ಬಿಎಂಟಿಸಿ ಆದೇಶ ಒಂದನ್ನು ಹೊರಡಿಸಿದ್ದು ಅದರಂತೆ ನೌಕರರಿಗೆ ರಜೆ ಕೊಡದೆ ನೌಕರರನ್ನು ಮಾನಸಿಕ ಒತ್ತಡಕ್ಕೆ ದೂಡಿದೆ.

6ದಿನ ಕೆಲಸ ಮಾಡಿದರೆ ಮಾತ್ರ ವಾರದ ರಜೆ ಎಂಬುವುದು ಸತ್ಯನಾ? ಈ ರೀತಿ ಎಲ್ಲಿಯೂ ಕಾನೂನಿಲ್ಲ. ಬಹುತೇಕ ಖಾಸಗಿ ಎಂಎಲ್‌ಸಿ ಕಂಪನಿಗಳಲ್ಲಿ ವಾರದಲ್ಲಿ ಕೇವಲ 5 ದಿನ ಕೆಲಸ ಮಾಡಿದರೆ ಎರಡು ದಿನ ರಜೆ ಸಿಗುತ್ತಿದೆ. ಆದರೆ ಇಲ್ಲಿ 6 ದಿನ ಕೆಲಸ ಮಾಡಿದರೆ ಮಾತ್ರ ವಾರದ ರಜೆ ಸಿಗುತ್ತದೆ ಎಂದು ಸುತ್ತೋಲೆ ಹೊರಡಿಸಿರುವುದು ಕಾನೂನು ಬಾಹಿರವಲ್ಲವೇ ಎಂದು ನೌಕರರೊಬ್ಬರು ಆರ್‌ಟಿಐ ಅಡಿಯಲ್ಲಿ ಉತ್ತರ ಕೇಳಿದ್ದರು.

ಅದರಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಆರ್‌ಟಿಐ ಅಧಿಕಾರಿಗಳು ಮಾಹಿತಿ ಒದಗಿಸಿದ್ದು, ನೀವು ಕೋರಿರುವಂತೆ ಕಾರ್ಮಿಕ ಇಲಾಖೆಯಿಂದಾಗಲೀ ಸಾರಿಗೆ ಇಲಾಖೆಯಿಂದಾಗಲೀ ನಮ್ಮ ಸಂಸ್ಥೆಯ ಕಾರ್ಮಿಕ ಇಲಾಖೆಗೆ ಆದೇಶದ ಪ್ರತಿ ಬಂದಿರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಆರ್‌ಟಿಐಯಡಿ ಅರ್ಜಿ ಹಾಕಿದ ದಿವ್ಯ ಉಮೇಶ್‌ ಎಂಬುವರು, ಕೈಗಾರಿಕಾ ಕಾಯ್ದೆ ಅಡಿಯಲ್ಲಿ ಬರುವ ಸಾರ್ವಜನಿಕ ಉಪಯುಕ್ತ ಸೇವೆ ಮಾಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಚಾಲನಾ ಸಿಬ್ಬಂದಿ/ ಕಾರ್ಮಿಕರು/ ಅಳುಗಳಿಗೆ ವಾರದಲ್ಲಿ ಆರು (6)ದಿನ ಕರ್ತವ್ಯ ನಿರ್ವಹಿಸಿದರೆ ಮಾತ್ರ ವಾರದ ರಜೆಗೆ ಅರ್ಹರು ಎಂದು ಕಾರ್ಮಿಕ ಇಲಾಖೆಯಿಂದಾಗಲೀ, ಸಾರಿಗೆ ಇಲಾಖೆಯಿಂದಾಗಲೀ ನಿಮ್ಮ ಸಂಸ್ಥೆಗೆ ಬಂದಿರುವ ಆದೇಶದ ಪ್ರತಿಯ ನೆರಳು ಪ್ರತಿಯನ್ನು ದೃಢೀಕರಿಸಿ ಕನ್ನಡದಲ್ಲಿಯೇ ಮಾಹಿತಿ ನೀಡಬೇಕೆಂದು ಕೋರಿದ್ದರು.

ಈ ವೇಳೆ ಈ ರೀತಿಯ ಯಾವುದೇ ಆದೇಶದ ಪ್ರತಿ ಬಂದಿಲ್ಲ ಎಂದು ಅಧಿಕಾರಿಯೇ ಲಿಖಿತವಾಗಿ ತಿಳಿಸಿದ್ದಾರೆ. ಅಂದರೆ ನಿಗಮದಲ್ಲಿ ನೌಕರರಿಗೆ ಕಿರುಕುಳ ಕೊಡುವುದಕ್ಕೇ ಈ ರೀತಿಯ ಸುತ್ತೋಲೆ, ಆದೇಶಗಳನ್ನು ನಿಗಮದ ಅಧಿಕಾರಿಗಳು ಹೊರಡಿಸುತ್ತಿದ್ದಾರೆಯೇ? ಇವರಿಗೆ ಈ ರೀತಿ ಆದೇಶ ಮಾಡುವುದಕ್ಕೆ ಅಧಿಕಾರವಿದೆಯೇ? ಇವರನ್ನು ಕೇಳುವವರು ಹೇಳುವವರು ಯಾರು ಇಲ್ಲವೇ? ನೌಕರರು ಈ ಬಗ್ಗೆ ಕೋರ್ಟ್‌ ಮೊರೆ ಹೋದರೆ ಆದೇಶ ಮಾಡಿರುವ ಅಧಿಕಾರಿಗೆ ಶಿಕ್ಷೆ ಆಗದೆ ಇರುತ್ತದೆ ಎಂಬ ಪ್ರಶ್ನೆ ನೌಕರರಲ್ಲಿ ಮೂಡಿದೆ.

ಈ ಬಗ್ಗೆ ನೌಕರರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ವಕೀಲರೊಬ್ಬರನ್ನು ವಿಜಯಪಥ ಸಂಪರ್ಕಿಸಿದಾಗ ಅವರು ತಲೆಕೆಟ್ಟ ನೌಕರ ಕೋರ್ಟ್‌ ಮೊರೆ ಹೋದರೆ ಬಹುಶಹ ಆದೇಶ ಮಾಡಿರುವ ಅಧಿಕಾರಿಗೆ ಶಿಕ್ಷೆಯಾಗುವುದಂತು ಗ್ಯಾರಂಟಿ ಎಂದು ಹೇಳಿದರು.

ಇನ್ನು ಈ ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳು ತಮ್ಮ ಮನಸ್ಸೋಯಿಚ್ಛೆ ಈ ರೀತಿ ಆದೇಶ ಮಾಡುವ ಮೂಲಕ ನೌಕರರನ್ನು ಬಿಡುವಿಲ್ಲದ ರೀತಿಯಲ್ಲಿ ದುಡಿಸಿಕೊಳ್ಳುತ್ತಿದ್ದರು, ಕೇಳ ಬೇಕಾದ ಸಂಘಟನೆಗಳು ಏನು ಮಾಡುತ್ತಿವೆ. ನೌಕರರ ಮೇಲೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಇದರ ನಡುವೆ ವಾರದ ರಜೆ ಬಿಟ್ಟು ಅವಶ್ಯಕತೆ ಇದ್ದಾಗ EL, CL, CML ಈ ರೀತಿಯ ರಜೆಗಳನ್ನು ತೆಗೆದುಕೊಳ್ಳುವುದಕ್ಕೂ ಅಧಿಕಾರಿಗಳೀಗೆ ಲಂಚ ಕೊಡುವ ಪರಿಸ್ಥಿತಿ ಇದೆ. ಈ ರೀತಿ ನೌಕರರನ್ನೇ ಸುಲಿದು ಸುಲಿದು ಹದ್ದಿನಂತೆ ಕಿತ್ತು ತಿನ್ನುವ ಅಧಿಕಾರಿಗಳಿಗೆ ನಾಚಿಕೆ ಆಗುವುದಿಲ್ಲವೇ? ಇದನ್ನು ಕೇಳ ಬೇಕಾದ ಮೇಲಧಿಕಾರಿಗಳು ಏನು ಮಾಡುತ್ತಿದ್ದಾರೆ? ಈ ಮೇಲಧಿಕಾರಿಗಳ ಮೂಗಿಗೂ ಈ ಲಂಚದ ವಾಸನೆ ಬಡಿಯುತ್ತಿದೆಯೇ ಎಂದು ಪ್ರಶ್ನಿಸಬೇಕಾದ ಅನಿವಾರ್ಯತೆ ಬಂದಿರುವುದು ದುರಂತ.

ಇನ್ನು ಈ ಬಗ್ಗೆ ಪ್ರಶ್ನಿಸಿ ಸರಿಪಡಿಸಬೇಕಾದ ಸಂಘಟನೆಗಳು ಇದಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ಮೌನವಾಗಿರುವುದು ಏತಕ್ಕೆ? ಕೆಲ ಸಂಘಟನೆಗಳ ಮುಖಂಡರೆನಿಸಿಕೊಂಡವರು ಬರಿ 4 ವರ್ಷಕ್ಕೊಮ್ಮೆ ಆಗುವ ಮೂಲ ವೇತನದ ಹೆಚ್ಚಳದ ಸಮಯದಲ್ಲಿ ಮಾತ್ರ ಶೂರರಂತೆ ನಡೆದುಕೊಳ್ಳುವದಕ್ಕಷ್ಟೇ ಈ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆಯೇ?

ಈ ನಡುವೆ ಅಷ್ಟೋ ಇಷ್ಟೋ ವೇತನ ಹೆಚ್ಚಳವಾದ ಮೇಲೆ ಇದು ಸರ್ಕಾರಸ ಏಕಪಕ್ಷೀಯ ನಿರ್ಧಾರ. ಇದು ನಮಗೆ ಒಪ್ಪಿಗೆ ಆಗಿಲ್ಲ ಎಂದು ನೌಕರರ ಮುಂದೆ ಕೂಗಾಡಿ, ತೋರಾಡಿ ಕೊನೆಗೆ ಮೂಲೆ ಸೇರಿಕೊಳ್ಳುತ್ತವೆ. ಇದೇ ಸಾರಿಗೆ ನೌಕರರ ಸಂಘಟನೆಗಳ ಬಹುತೇಕ ಮುಖಂಡರ ಸ್ವಭಾವ. ಇದರಿಂದ ನೌಕರರ ಸ್ಥಿತಿ ವರ್ಷದಿಂದ ವರ್ಷಕ್ಕೆ ಉತ್ತಮದಿಂದ ಕೆಳಮಟ್ಟಕ್ಕೆ ಇಳಿಯುತ್ತಿದೆ.

ಒಂದು ಹಂತದಲ್ಲಿ ಅಧಿಕಾರಿಗಳು ತಮಗೆ ಬೇಕಾದ ರೀತಿ ವೇತನ ಶ್ರೇಣಿಗಳನ್ನು ಏರಿಸಿಕೊಂಡು ಸರ್ಕಾರಿ ನೌಕರರಿಗೆ ಸರಿಸಮನಾಗಿ ವೇತನ ಪಡೆದುಕೊಳ್ಳುತ್ತಾರೆ. ಆದರೆ ಚಾಲನಾ ಸಿಬ್ಬಂದಿ, ತಾಂತ್ರಿಕಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಗಳಿಗೆ ಈ ರೀತಿಯ ವೇತನ ಶ್ರೇಣಿಗಳನ್ನು ಪ್ರಾಮಾಣಿಕವಾಗಿ ಮಾಡದೆ ಅವರನ್ನು ಕೀಳಾಗಿ ಕಾಣುತ್ತಿದ್ದಾರೆ. ಇದಕ್ಕೆಲ್ಲ ನಾವು ಅಧಿಕಾರಿಗಳನ್ನಾಗಲಿ ಇಲ್ಲ ಸರ್ಕಾರವನ್ನಾಗಲಿ ದೂಷಿಸುವುದಕ್ಕೆ ಬರುವುದಿಲ್ಲ. ಕಾರಣ ಇದಕ್ಕೆಲ್ಲ ನೌಕರರ ಸಂಘಟನೆಗಳ ಬೇಜವಾಬ್ದಾರಿಯೇ ಕಾರಣ.

ಇನ್ನಾದರೂ ನೌಕರರಿಗೆ ಸಿಗಬೇಕಿರುವ ವಾರದ ರಜೆಯನ್ನಾದರೂ ಸರಿಯಾಗಿ ಕೊಡುವುದಕ್ಕೆ ಘಟಕ ಮಟ್ಟದ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿ ಸರಿ ದಾರಿಗೆ ತರುವುದಕ್ಕೆ ನೌಕರರ ಸಂಘಟನೆಗಳು ಮುಂದಾಗಬೇಕಿದೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ