2025ರ ಮಾರ್ಚ್ ವೇಳೆಗೆ ಉಳಿದ 3 ಸಾರಿಗೆ ನಿಗಮಗಳ ನೌಕರರಿಗೆ ನಗದು ರಹಿತ ಚಿಕಿತ್ಸಾ ಯೋಜನೆ- ಸಚಿವರು ಕೊಟ್ಟ ಮಾತು.. ಸಿಎಂ ಹೇಳಿಕೆ ಏನಾಗಿದೆ ಗೊತ್ತಾ?



ಬೆಂಗಳೂರು: ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ನೌಕರರಿಗೆ ಕಳೆದ 2025 ಜನವರಿ 6ರಿಂದ ನಗದು ರಹಿತ ವೈದ್ಯಕೀಯ ಸೌಲಭ್ಯ ದೊರೆಯುತ್ತಿದ್ದು, ಮುಂದಿನ ಮಾರ್ಚ್-2025ರ ವೇಳೆಗೆ ಉಳಿದ ಬಿಎಂಟಿಸಿ, ಕೆಕೆಆರ್‌ಟಿಸಿ ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮಗಳ ಅಧಿಕಾರಿಗಳು/ ನೌಕರರಿಗೂ ಈ ಸೌಲಭ್ಯ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದರು.
ಆದರೆ, ಅವರು ಕೊಟ್ಟ ಮಾತು 10 ತಿಂಗಳು ಕಳೆದರೂ ಕಾರ್ಯ ರೂಪಕ್ಕೆ ಬಂದೇ ಇಲ್ಲ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ. ಒಂದರ್ಥದಲ್ಲಿ ಸಾರಿಗೆ ನಿಗಮಗಳ ನೌಕರರು ಎಂದರೆ ಸರ್ಕಾರ ಏಕೋ ಗೊತ್ತಿಲ್ಲ ಮಲತಾಯಿಯ ವರ್ತನೆ ತೋರುತ್ತಿದೆ.
ಕಾರಣ 2020ರ ಜನವರಿ 1ರಿಂದ ಜಾರಿಗೆ ಬಂದಿರುವ ವೇತನದ 38 ತಿಂಗಳ ಹಿಂಬಾಕಿ ಕೊಡುವುದಕ್ಕೂ ಮೀನಮೇಷ ಎಣಿಸುತ್ತಿದೆ. ಜತೆಗೆ 2024ರ ಜನವರಿ 1ರಿಂದ ಮತ್ತೆ ಜಾರಿಗೆ ಬರಬೇಕಿರುವ ವೇತನ ಹೆಚ್ಚಳದ ಬಗ್ಗೆ ನೌಕರರ ಸಂಘಟನೆಗಳು ಕೇಳಿದರೆ ಅಸಡ್ಡೆಯಾಗಿ ನಡೆದುಕೊಳ್ಳುತ್ತಿದೆ ಈ ಕಾಂಗ್ರಸ್ ಸರ್ಕಾರ.
ಇದರ ನಡುವೆ ಪ್ರಸ್ತುತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನೌಕರರ ಹಲವಾರು ವರ್ಷಗಳ ಕನಸುನ್ನು ಕಳೆದ ಜ.26ರಿಂದ ಅಧಿಕೃತವಾಗಿ ನನಸಾಗಿದ್ದು, ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ (ಆರೋಗ್ಯ ಕಾರ್ಡ್)ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು.
ಆದರೆ, ಉಳಿದ ಬಿಎಂಟಿಸಿ, ಕೆಕೆಆರ್‌ಟಿಸಿ ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮಗಳ ಅಧಿಕಾರಿಗಳು/ ನೌಕರರಿಗೂ ಈ ಸೌಲಭ್ಯ ನೀಡಲಾಗುವುದು ಎಂದು ಈಗ ಅದರ ಬಗ್ಗೆ ಯಾವುದೇ ಸಿದ್ಧತೆ ಅಥವಾ ಇತರೆ ಪ್ರಗತಿ ಕಾಣುತ್ತಿಲ್ಲ.
ಈ ಎಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ಜ.6ರಂದು ಬೆಳಗ್ಗೆ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಯೋಜನೆಯ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ್ದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತರಿದ್ದರು.

ಸರ್ಕಾರಿ ಒಡೆತನದ ಸಾರಿಗೆ ಸಂಸ್ಥೆಗಳ ಪೈಕಿ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಮಾಡಿರುವುದು ದೇಶದಲ್ಲೇ ಮೊದಲನೆಯ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಈ ಮೂಲಕ ಪಾತ್ರವಾಗಿದೆ ಎಂದು ಸಿಎಂ ಹೆಮ್ಮೆಯಿಂದ ಅಂದು ಹೇಳಿದ್ದರು.
ಅಲ್ಲದೆ ಕರ್ನಾಟಕ ಸರ್ಕಾರ ರಾಜ್ಯದ ಖಾಸಗಿ ಮತ್ತು ಆಯುರ್ವೇದಿಕ್ ಸೇರಿದಂತೆ 250ಕ್ಕೂ ಹೆಚ್ಚು ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆಯಂತೆ ಕೆಎಸ್ಆರ್ಟಿಸಿ ಅಧಿಕಾರಿಗಳು/ನೌಕರರು ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಸಂಸ್ಥೆ ಕೊಟ್ಟಿರುವ ಆರೋಗ್ಯ ಕಾರ್ಡ್ ತೋರಿಸುವ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು. ಅದರಂತೆ ಕೆಎಸ್ಆರ್ಟಿಸಿ ಅಧಿಕಾರಿಗಳು/ನೌಕರರು ಸೌಲಭ್ಯ ಪಡೆಯುತ್ತಿದ್ದಾರೆ.
ಅದು ಕೂಡ ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಸೇರಿದಂತೆ ಸಾಮಾನ್ಯ ಆಸ್ಪತ್ರೆಯಲ್ಲೂ ಕೆಎಸ್ಆರ್ಟಿಸಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದು ರಹಿತ ಚಿಕಿತ್ಸೆ ದೊರೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದು ಸಂತಸದ ವಿಷಯವೆ.
ಆರೋಗ್ಯ ಕಾರ್ಡ್ ಮೂಲಕ ಸಿಬ್ಬಂದಿಯ ಕುಟುಂಬದ ಸದಸ್ಯರು (ಪತಿ, ಪತ್ನಿ, ಮಕ್ಕಳು, ತಂದೆ, ತಾಯಿ) ಈ ಸೌಲಭ್ಯವನ್ನು ಪಡೆಯಬಹುದು. ಒಟ್ಟಾರೆಯಾಗಿ, ಕುಟುಂಬದ ಸದಸ್ಯರಿಗೆ ನಗದು ರಹಿತ ಆರೋಗ್ಯ ಸೇವೆ ಲಭ್ಯವಾಗಲಿದೆ. ನೌಕರರು ನಿವೃತ್ತಿಯಾಗುವವರೆಗೂ ಈ ಸೌಲಭ್ಯಕ್ಕೆ ಅರ್ಹರು.
ಈ ಸೌಲಭ್ಯ ಪಡೆಯಲು ಕೆಎಸ್ಆರ್ಟಿಸಿ ನೌಕರರು ಪ್ರತಿ ತಿಂಗಳು 650 ರೂಪಾಯಿ ಪಾವತಿಕೂಡ ಮಾಡುತ್ತಿದ್ದಾರೆ. ಕೆಎಸ್ಆರ್ಟಿಸಿ ನಿಗಮ 600 ರೂಪಾಯಿ ಪಾವತಿ ಮಾಡುತ್ತಿದೆ. ಇದರಿಂದ ವರ್ಷಕ್ಕೆ ಒಟ್ಟು 46 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ.
ಆದರೆ, ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ದೊರೆಯುತ್ತಿದ್ದು, ಮುಂದಿನ ಮಾರ್ಚ್ ವೇಳೆಗೆ ಉಳಿದ ಬಿಎಂಟಿಸಿ, ಕೆಕೆಆರ್‌ಟಿಸಿ ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮಗಳ ಅಧಿಕಾರಿಗಳು/ನೌಕರರಿಗೂ ಈ ಸೌಲಭ್ಯ ನೀಡಲಾಗುವುದು ಅಂದು ಹೇಳಿಕೆ ನೀಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈವರೆಗೂ ಅಂದರೆ 9 ತಿಂಗಳು ಕಳೆದರೂ ಈ ಮೂರು ನಿಗಮಗಳಲ್ಲಿ ಯೋಜನೆ ಜಾರಿ ಮಾಡಿಲ್ಲ ಏಕೆ?
ಅಲ್ಲದೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಪಡೆಯುವುದಕ್ಕೆ ಮೊದಲು ಉಳಿದ ಮೂರು ನಿಗಮಗಳು ಎಚ್‌ಆರ್‌ಎಂಎಸ್‌ಗೆ ಒಳಪಡಬೇಕು, ಆ ಬಳಿಕ ನೌಕರರಿಗೆ ಈ ಸೌಲಭ್ಯ ನೀಡಲು ಸಾಧ್ಯವಾಗಲಿದೆ. ಹೀಗಾಗಿ ನಾವು ಈಗಾಗಲೇ ಈ ಮೂರು ನಿಗಮಗಳ ನೌಕರರನ್ನು HRMSಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಫಾರಂಗಳನ್ನು ವಿತರಿಸಿದ್ದೇವೆ ಎಂದು ಅಂದೇ ಅಂದರೆ ಜ.6ರಂದೇ ಮಾಹಿತಿ ನೀಡಿದ್ದರು.
ಆದರೆ, ಅವರು ಹೇಳಿಕೆ ನೀಡಿ 9ತಿಂಗಳು ಕಳೆರೂ ಕೂಡ ಈವರೆಗೂ HRMS ಅಳವಡಿಕೆ ಕೂಡ ಆಗಿಲ್ಲ. ಅಲ್ಲದೆ ಅಂದು ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಕೊಂಚಿಕೊಂಡ ಸಿಎಂ ಕೂಡ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನವಾಗಿರುವುದು ಏಕೆ? ನಾನು ಅಹಿಂದ (ಅಲ್ಪಸಂಖ್ಯಾತರು , ಹಿಂದುಳಿದವರು ಮತ್ತು ದಲಿತರು) ಪರ ಸಿಎಂ ಎಂದು ಹೇಳಿಕೊಳ್ಳು ಸಿದ್ದರಾಮಯ್ಯ ಅವರು ಅಹಿಂದರೇ ಹೆಚ್ಚಿರುವ ಸಾರಿಗೆ ನಿಗಮಗಳ ನೌಕರರ ಬಗ್ಗೆ ಏಕೆ ಕಾಳಜಿ ವಹಿಸುತ್ತಿಲ್ಲ.
ಇದನ್ನು ಗಮನಿಸಿದರೆ ನಾನು ಅಲ್ಪಸಂಖ್ಯಾತರು , ಹಿಂದುಳಿದವರು ಮತ್ತು ದಲಿತರ ಪರ ಇದ್ದೇನೆ ಎಂದು ಸಿಎಂ ಹೇಳಿಕೊಳ್ಳುವುದು ಬರಿ ಪುಸ್ತಕದ ಬದನೆಕಾಯಿಯಂತೆ ಕಾಣುತ್ತಿದೆ. ಹೌದು ಎನ್ನುತ್ತಿದ್ದಾರೆ ಇತ್ತ ವಿಪಕ್ಷದ ನಾಯಕರು ಕೂಡ.
ಹೀಗಾಗಿ ತಾವು ಇನ್ನಾದರೂ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಪರ ಎಂಬ ಹೇಳಿಕೆ ನೀಡಿರುವಂತೆ ಅದನ್ನು ಅಂದರೆ ಸಾರಿಗೆ ನಿಗಮಗಳ ನೌಕರರಿಗೆ ಕಾನೂನು ಬದ್ಧವಾಗಿ ಸೌಲಭ್ಯ ಕಲ್ಪಿಸುವ ಮೂಲಕ ಕಾರ್ಯರೂಪಕ್ಕೆ ತರಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
Related
