ಬೆಂಗಳೂರು: ರಾಜ್ಯಮಟ್ಟದಲ್ಲಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಅತ್ಯಂತ ಶಕ್ತಿಯುತವಾಗಿದೆ ಎಂದು ಕೆಎಸ್‌ಆರ್‌ಟಿಸಿ & ಬಿಎಂಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಸಂತಸ ಹಂಚಿಕೊಂಡರು.
ಲಾಲ್ ಬಾಗ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಇಪಿಎಸ್ ಪಿಂಚಣಿದಾರರ 80ನೇ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ಈ ಸಂಘಟನೆ ಶಕ್ತಿಯುತವಾಗಿದ್ದರೆ, ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಭಾರಿ ಬಲಿಷ್ಟವಾಗಿದೆ ಎಂದು ತಿಳಿಸಿದರು.
ಇನ್ನು ನಮ್ಮ ಮುಖಂಡರು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಕನಿಷ್ಠ ಹೆಚ್ಚುವರಿ ಪಿಂಚಣಿ ಬಗ್ಗೆ ಅಹವಾಲನ್ನು ಮಂಡಿಸಿ, ಚರ್ಚೆ ನಡೆಸಿದ್ದು ಈ ಬಗ್ಗೆ ಅವರು ಕೂಡ ಭರವಸೆ ನೀಡಿದ್ದಾರೆ ಎಂಬ ಮಾತನನ್ನು ಕೇಳಿದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ವಿವರಿಸಿದರು.
ಇಪಿಎಸ್ ಪಿಂಚಣಿದಾರರ ಹೋರಾಟ ಅಂತಿಮ ಘಟ್ಟ ತಲುಪಿದ್ದು, ಕೇಂದ್ರ ವಿತ್ತಸಚಿವರ ಜತೆ ನಮ್ಮ ನಾಯಕರು ನಡೆಸಿರುವ ಮಾತುಕತೆ ಫಲಪ್ರದವಾಗಿದೆ. ಅಂತಿಮ ನಿರ್ಣಯಕ್ಕಾಗಿ ನಾವೆಲ್ಲರೂ ಎದುರು ನೋಡುತ್ತಿದ್ದೇವೆ ಅಷ್ಟೆ ಎಂದು ತಿಳಿಸಿದ ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಅವರು, ನಾವು ಅಂತಿಮ ಗುರಿ ಮುಟ್ಟುವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಎನ್‌ಎಸಿ ಖಜಾಂಚಿ ಎಸ್ಎನ್ ಕುಲಕರ್ಣಿ ಮಾತನಾಡಿದರು. ಸಭೆಗೆ ಚಿಕ್ಕಬಳ್ಳಾಪುರದ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಸಂಘದ ಪದಾಧಿಕಾರಿಗಳಾದ ರುಕ್ಮಿಶ್ ಹಾಗೂ ನಾಗರಾಜು ಸೇರಿದಂತೆ ಸಭೆಗೆ ನೂರಾರು ನಿವೃತ್ತರು ಆಗಮಿಸಿದ್ದರು.
ಸಂಘದ ಸಂಘಟನಾ ಕಾರ್ಯದರ್ಶಿ ಆರ್.ಮನೋಹರ್ ಎಲ್ಲ ಇಪಿಎಸ್ ನಿವೃತ್ತರು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಎನ್ಎಸಿ ರಾಜ್ಯಾಧ್ಯಕ್ಷ ಜೆಎಸ್ಎಂ ಸ್ವಾಮಿ ಅವರನ್ನು ಸ್ವಾಗತಿಸಿ, ನಮ್ಮ ಹೋರಾಟದ ಸಂಪೂರ್ಣ ಚಿತ್ರಣವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.