- ಸಾರಿಗೆ ಸಚಿವರು ಇದ್ದರು ಹಬ್ಬದ ಮೋಜಿನಲ್ಲಿ, ಮುಖ್ಯಮಂತ್ರಿ ಸ್ಥಾನದ ಅರಿವೇ ಇಲ್ಲದ ಸಿಎಂ ನೋಟವಿತ್ತು ಪಿಎಂ ಬರುವಿಕೆಯತ್ತ
- ಸಾರಿಗೆ ನಿಗಮಗಳಿಗೆ 3 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ಜಂಬಕೊಚ್ಚಿಕೊಳ್ಳಬೇಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ನೌಕರರ ಜೀವಕ್ಕೆ ಕಿಂಚಿತ್ತು ಬೆಲೆ ಇಲ್ಲದಂತಾಗಿದೆ. ನಮ್ಮ ನಿಗಮದ ಅಧಿಕಾರಿಗಳು ಮತ್ತು ಪ್ರಸ್ತುತ ರಾಜ್ಯವಾಳುತ್ತಿರುವ ಜನ ಪ್ರತಿನಿಧಿಗಳ ಮಾನವೀಯ ಮೌಲ್ಯಕ್ಕೆ ಇದಕಿಂತ ಬೇರೆ ನಿದರ್ಶನ ಬೇಕೆ..!?
ನೋಡ್ರಿ ಇತ್ತೀಚೆಗೆ ಬಿಎಂಟಿಸಿಯ ಮೂರು ಡಿಪೋಗಳಲ್ಲಿ 24 ಗಂಟೆಯೊಳಗೆ ಮೂವರು ನಿಗಮದ ನೌಕರರು ಆತ್ಮಹತ್ಯೆ ಮಾಡಿಕೊಂಡರು. ಈ ವೇಳೆ ಬೆಂಗಳೂರಿನ ಕೇಂದ್ರ ಸ್ಥಾನದಲ್ಲೇ ಇದ್ದ ಎಂಡಿ ಜಿ. ಸತ್ಯವತಿ ಅವರು ತಮ್ಮ ನೌಕರರ ಅಂತಿಮ ದರ್ಶನ ಪಡೆಯಬಹುದಾಗಿತ್ತು. ಆದರೆ, ಆ ಯಾವುದೇ ಗೋಜಿಗೆ ಹೋಗದೆ ಆತ್ಮಹತ್ಯೆ ಮಾಡಿಕೊಂಡವರನ್ನು ಕಾಲು ಕಸಕ್ಕಿಂತ ಕೀಳಾಗಿ ನೋಡಿದರು.
ಇದು ತಮ್ಮದೇ ಸಂಸ್ಥೆಯಲ್ಲಿ ಅದೂ ನಿಷ್ಠೆಯಿಂದ ದುಡಿದ ನೌಕರರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದರೆ ಅದಕ್ಕೆ ಪ್ರಬಲ ಕಾರಣ ಏನು ಎಂದು ಒಬ್ಬ ಐಎಎಸ್ ಮಾಡಿರುವ ಅಧಿಕಾರಿಗೆ ಅರ್ಥವಾಗದೇ ಇರದು. ಇಷ್ಟಾದರೂ ಸೌಜನ್ಯಕ್ಕಾದರೂ ತಮ್ಮ ನಿಗಮದ ಮೃತರ ಅಂತಿಮ ದರ್ಶನ ಪಡೆಯಲ್ಲಿಲ್ಲ. ಶವವನ್ನು ಇಟ್ಟುಕೊಂಡು ಹೋರಾಟ ಮಾಡಿದರೂ ಕಿವಿಕೊಡಲಿಲ್ಲ ಎಂದರೆ ಇವರ ಆ ಸ್ಥಾನದಲ್ಲಿ ಇರಲು ಅರ್ಹರೆ ಎಂದು ಇವರೆ ಒಮ್ಮೆ ಯೋಚಿಸಬೇಕಿದೆ.
ಸಾರಿಗೆ ನಿಗಮ ಎಂಬುವುದು ನೌಕರರ ಕಿತ್ತು ತಿನ್ನುವ ಅಥವಾ ಕಚ್ಚಿ ಕೊಲ್ಲುವ ಹುಳು, ಹಾವಿನಂತಾಗಿರುವುದು ಪ್ರಸ್ತುತ 100ಕ್ಕೆ ನೂರು ಸತ್ಯ. ಇದನ್ನು ಯಾರು ಅಲ್ಲಗಳೆಯಲಾಗದು. ಇನ್ನು ಭ್ರಷ್ಟಾಚಾರದ ವಿಚಾರಕ್ಕೆ ಬಂದರೆ ರಾಜ್ಯ ಸರ್ಕಾರ ಗುತ್ತಿಗೆದಾರರಿಂದ 40% ಕಮಿಷನ್ ದಂಧೆ ಮಾಡುತ್ತಿದ್ದರೆ, ನಿಗಮದಲ್ಲಿ ಅಮಾನತು, ವರ್ಗಾವಣೆ ನೆಪಮಾಡಿ ನೂರಕ್ಕೆ 99% ಲಂಚ ಪಡೆದು ನೌಕರರನ್ನು ಕಾಡುವ ಅಧಿಕಾರಿಗಳು ಶೇ.60ಕ್ಕೂ ಹೆಚ್ಚಿನ ಸಂಖ್ಯೆಯಲ್ಲೇ ಇದ್ದಾರೆ.
ಲೆಕ್ಕಕ್ಕೆ ಇಲ್ಲದ ಸ್ಥಳಕ್ಕೆ ವರ್ಗಾವಣೆ: ಇನ್ನುಳಿ ಶೇ.40ಕ್ಕಿ ಕಡಿಮೆ ಸಂಖ್ಯೆ ಅಧಿಕಾರಿಗಳು ಯಾವುದೇ ಲಂಚಕ್ಕೆ ಆಸೆ ಪಡದಿದ್ದರೂ ಅವರನ್ನು ಲಂಚ ಪಡೆಯುವಂತೆ ಕೆಲ ದುರುಳ ಅಧಿಕಾರಿಗಳು ಅಧೀನ ಅಧಿಕಾರಿಗಳಿಗೆ ತಾಕೀತೆ ಮಾಡುತ್ತಾರೆ. ಒಂದು ವೇಳೆ ಅವರು ನಮ್ಮಿಂದ ಲಂಚ ಪಡೆಯೋದಕ್ಕೆ ಸಾಧ್ಯವೆ ಇಲ್ಲ ಎಂದು ಕಡಖಂಡಿತವಾಗಿ ಹೇಳಿದರೆ ಅವರನ್ನು ಯಾವುದೋ ಒಂದು ಲೆಕ್ಕಕ್ಕೆ ಇಲ್ಲದ ಸ್ಥಳಕ್ಕೆ ವರ್ಗಾವಣೆ ಮಾಡುವ ಕಿತಪತಿತನವು ಇದೆ.
ಇನ್ನು ಪ್ರಸ್ತುತ ನಾಲ್ಕೂ ನಿಗಮಗಳಲ್ಲಿ ಇರುವ ಎಂಡಿಗಳು ಸ್ವಲ್ಪ ಮಟ್ಟಿಗೆ ನೌಕರರ ಪರವಾಗೇ ಅಂದರೆ ಕಾನೂನು ರೀತಿಯಲ್ಲೇ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ ಎಂದು ಹೇಳಬಹುದು. ಆದರೆ, ತಮ್ಮ ಸಂಸ್ಥೆಯಲ್ಲಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ನೌಕರರ ಮನಸ್ಸನ್ನು ಏಕೆ ಬದಲಾಯಿಸುವ ಇಚ್ಛೆ ತೋರುತ್ತಿಲ್ಲ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.
ಅಧಿಕಾರಿಗೆ ಇರಬೇಕಾದ ಒಂದು ಮಾನವೀಯತೆಯಲ್ಲವೇ?: ಒಬ್ಬ ಸಂಸ್ಥೆಯ ನೌಕರರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅವರನ್ನು ನೋಡಿ ಬರುವ ಮತ್ತು ಆ ನೌಕರನ ಕುಟುಂಬಕ್ಕೆ ಒಂದು ಸಾಂತ್ವನದ ಮಾತು ಹೇಳುವ ಸೌಜನ್ಯವು ಈ ಉನ್ನತ ಅಧಿಕಾರಿಗಳಿಗೆ ಏಕೆ ಇಲ್ಲ. ಇವರಿಗೆ ನಾವು ಉನ್ನತ ಅಧಿಕಾರದಲ್ಲಿದ್ದೇವೆ ಎಂಬ ಅಹಂಮೇ ಇಲ್ಲ ಅಲ್ಲಿಗೆ ಹೋದರೆ ನೌಕರರು ನಮಗೆ ಏನು ಮಾಡುವರೋ ಎಂಬ ಭಯವೋ. ಅದೇನೆ ಇರಲಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಮತ್ತು ಆತ್ಮಕ್ಕೆ ಶಾಂತಿ ಕೋರುವುದು ಉನ್ನತ ಅಧಿಕಾರಿಗೆ ಇರಬೇಕಾದ ಒಂದು ಮಾನವೀಯತೆಯಲ್ಲವೇ?
ಇನ್ನು ರಾಜಕಾರಣಿಗಳು ಯಾರಾದರೂ ಒಬ್ಬ ಕಳ್ಳ, ಕೊಲೆಗಾರ ಹತ್ಯೆಯಾದರೆ ಅವರ ಕುಟುಂಬದವರನ್ನು ಭೇಟಿ ಮಾಡಿ 25-50 ಲಕ್ಷ ರೂ. ಪರಿಹಾರ ನೀಡಿ ಸಾಂತ್ವನ ಹೇಳಿ ಬರುತ್ತಾರೆ. ಆದರೆ, ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ದೃಷ್ಟಿಯಲ್ಲಿ ಜನರ ಸೇವೆ ಮಾಡುತ್ತಿರುವ ಸಾರಿಗೆ ನೌಕರರ ಬಗ್ಗೆ ಮಾತ್ರ ಇದುವರೆಗೂ ಇಂಥ ಸಾಂತ್ವನ ಹೇಳಲು ಹೋಗದಿರುವುದು ಇವರ ನಡೆ ಏನೆಂದು ತೋರಿಸುತ್ತಿದೆ.
ಓಟಿಗಾಗಿ ರಾಜಕಾರಣಕ್ಕಾಗಿ ಕೊಲೆಗಾರ ಹತ್ಯೆಯಾದರೆ ಅವರ ಮನೆಯವರನ್ನು ಭೇಟಿ ಮಾಡಿ ಸಾರ್ವಜನಿಕರ ಹಣವನ್ನು ಪರಿಹಾರವಾಗಿ ನೀಡುವ ಇಂಥ ನೀಚ ರಾಜಕಾರಣಿಗಳು, ತಮ್ಮದೇ ನಿಗಮದ ಒಬ್ಬ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಅವರ ಕುಟುಂಬದವರಿಗೇಕೆ ಪರಿಹಾರ ಘೋಷಣೆ ಮಾಡುವುದಿಲ್ಲ. ಅಂದರೆ ಇಂದಿನ ರಾಜಕಾರಣಿಗಳು ಬಹುತೇಕ ಶೇ.98ರಷ್ಟು ನೀಚರಾಗಿದ್ದಾರೆ ಎಂಬುದನ್ನು ತಮಗೇ ತಾವೇ ಸಾಬೀತುಪಡಿಸಿಕೊಳ್ಳುವ ಸಲುವಾಗಿ ಕೊಲೆಗಡುಕರಿಗೆ ಹತ್ಯೆಕೋರರಿಗೆ ಪರಿಹಾರ ಕೊಡುತ್ತಿದ್ದಾರೆ ಅಂದಂಗೆ ಆಯಿತು ಅಲ್ಲವೇ?
ಸೇವೆಗಾಗಿ ಎಂದು ಹೇಳಿ ಲೂಟಿ ಮಾಡುವುದ ಬಿಡಿ: ಇನ್ನು ರಾಜಕಾರಣಕ್ಕೆ ಬಂದ ಕೂಡಲೇ ನೂರಾರು, ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಇವರ ಬಳಿ ಸಂಗ್ರಹವಾಗುತ್ತದೆ. ಅದು ಹೇಗೆ ಬರುತ್ತದೆ ಇವರಿಗೆ. ಜನರ ಬಳಿ ಓಟಿನ ಭಿಕ್ಷೆ ಬೇಡಿ ಗೆದ್ದ ಬಳಿಕ ಇರುವ ಕುಬೇರರು ಹೇಗಾಗುತ್ತಾರೆ. ಅದೂ ಬೇನಾಮಿ ಹೆಸರಿನಲ್ಲಿ ಸಾವಿರಾರು ಕೋಟಿ ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರಲ್ಲ ಇವರೇನು ಸತ್ತ ಮೇಲೆ ಹೊತ್ತುಕೊಂಡು ಹೋಗುತ್ತಾರಾ?
ಇನ್ನಾದರೂ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡಿ. ಇಲ್ಲದಿದ್ದರೆ ನೀವು ಇತರರಿಗಿಂತಲೂ ಪ್ರಯೋಜನಕ್ಕೆ ಬಾರದವರು ಎನಿಸಿಕೊಂಡು ತೊಲಗಿ, ಏಕೆಂದರೆ ಕಳೆದ 6 ವರ್ಷಗಳ ಹಿಂದೆ ಇದ್ದ ಸರ್ಕಾರ ಮಾಡಿರುವ ವೇತನ ಹೆಚ್ಚಳ ಬಿಟ್ಟರೆ ನೀವು ಕಡಿದು ಗುಡ್ಡೆಯಾಕಿರುವುದು ಏನು ಇಲ್ಲ. ಹಾಗೆ ನೋಡಿದರೆ ನಿಮ್ಮ ಸರ್ಕಾರ ಬಂದಮೇಲೆ ಸಾರಿಗೆ ನಿಗಮಗಳಿಗೆ ನೀವು ಕೊಟ್ಟಿರುವುದು ದೊಡ್ಡ ಸೊನ್ನೆಯೇ.
ಇನ್ನು ನಾವು ಕೊರೊನಾ ವೇಳೆ 3 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ಜಂಬಕೊಚ್ಚಿಕೊಳ್ಳಬೇಡಿ, ಸಾರಿಗೆ ನಿಗಮಕ್ಕೆ ನೀವು ಕೊಟ್ಟಿರುವುದು ಬಿಟ್ಟಿಯೇನಲ್ಲ ಕೊಡಬೇಕಿರುವುದರಲ್ಲಿ ಶೇ.25ರಷ್ಟು ಅಷ್ಟೇ ಕೊಟ್ಟಿದ್ದೀರಿ ಇನ್ನು ಶೇ.75ರಷ್ಟು ಕೊಡಬೇಕಿದೆ. ಅದು ಯಾವುದೆಂದರೆ, ವಿದ್ಯಾರ್ಥಿಗಳ, ಹಿರಿಯ ನಾಗರಿಕರ, ಕಟ್ಟಡ, ಪೊಲೀಸ್ ಹೀಗೆ ಹಲವಾರು ರಿಯಾಯಿತಿ ಪಾಸ್ ಕೊಡಿಸಿರುವುದರ ಉಳಿದ ಹಣ. ಅದನ್ನು ಕೊಡದೇ ನುಂಗಿ ನೀರುಕುಡಿಯಬೇಡಿ ಈಗಲಾದರೂ ಬಿಡುಗಡೆ ಮಾಡಿ ಮಾಧ್ಯಮಗಳ ಮುಂದೆ ಸತ್ಯ ನುಡಿಯಿರಿ.
ಆ ಎಲ್ಲ ಹಣವನ್ನು ಮೊದಲು ಬಿಡುಗಡೆ ಮಾಡಿ ಸಾರಿಗೆ ನಿಗಮಗಳು ಇರುವುದು ಸೇವೆಗಾಗಿ ಎಂದು ಹೇಳಿ ಲೂಟಿ ಮಾಡುವುದನ್ನು ಬಿಡಿ, ಸಂಸ್ಥೆಗೆ ನ್ಯಾಯಯುತವಾಗಿ ಕೊಡಬೇಕಾಗಿರುವುದನ್ನು ಕೊಟ್ಟರೆ ನೌಕರರು ಅಧಿಕಾರಿಗಳು ಆವರ ಕೆಲಸವನ್ನು ಅವರು ಮಾಡಿಕೊಂಡು ಹೋಗುತ್ತಾರೆ. ಮೊದಲು ಅದಕ್ಕೆ ಅವಕಾಶ ಮಾಡಿಕೊಡಿ.