ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಹರಿರುವ 200 ಜನರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನೇಮಕಾತಿ ಆದೇಶ ಪತ್ರ ವಿತರಿಸಿದರು.
ಶುಕ್ರವಾರ ಆಯೋಜಿಸಿದ್ದ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮಲ್ಲಿ ಬಿಎಂಟಿಸಿಯ 200 ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಡಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಿದ ಸಚಿವರು ಅಭ್ಯರ್ಥಿಗಳು ಮತ್ತು ಕುಟುಂಬದವರಿಗೆ ಶುಭ ಕೋರಿದೆ.
ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿಯವರು, 546 ಅರ್ಹ ಅಭ್ಯರ್ಥಿಗಳಿದ್ದಾರೆ. ಸದ್ಯಕ್ಕೆ 200 ಅಭ್ಯರ್ಥಿಗಳನ್ನು ಈಗ ನೇಮಕ ಮಾಡಿಕೊಂಡಿದ್ದು, ಉಳಿದವರಿಗೂ ಮುಂದಿನ ದಿನಗಳಲ್ಲಿ ನೌಕರಿ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್ಟೇಕಿಂಗ್ (ಎಎಸ್ಆರ್ಟಿಯು) ವತಿಯಿಂದ ಇತ್ತೀಚೆಗೆ ಗುಜರಾತ್ನ ಅಹಮದಾಬಾದ್ಬಲ್ಲಿ ಆಯೋಜಿಸಿದ್ದ ಅಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಕ್ರೀಡಾಕೂಟದಲ್ಲಿ ಜಯಗಳಿಸಿದವರನ್ನು ಸನ್ಮಾನಿಸಲಾಯಿತು.
ವಾಲಿಬಾಲ್ನಲ್ಲಿ ಪ್ರಥಮ ಸ್ಥಾನ, ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಬೆಳ್ಳಿ, ಡಬಲ್ಸ್ನಲ್ಲಿ ಕಂಚು ಪಡೆದ ಬಿಎಂಟಿಸಿ ತಂಡದ ಸದಸ್ಯರನ್ನು ಸಚಿವರು ಗೌರವಿಸಿದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಸೇರಿದಂತೆ ಉನ್ನತ ಅಧಿಕಾರಿಗಳು ಹಾಗೂ ನೇಮಕಾತಿ ಆದೇಶ ಪತ್ರಪಡೆಯಲು ಬಂದಿದ್ದವರ ಜತೆ ಕುಟುಂಬದವರು ಉಪಸ್ಥಿತರಿದ್ದರು.