ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ ಅದರಲ್ಲೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನೌಕರರು ಜೀವ ಭಯದಲ್ಲೇ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಬಂದಿದೆ.
ಹೌದು! ತಡರಾತ್ರಿ ಅಂದರೆ ಏ.5ರ ರಾತ್ರಿ 12.30ರ ಸುಮಾರಿಗೆ ಕುಮಾರಸ್ವಾಮಿ ಬಡಾವಣೆಯ ಇ ಬಸ್ ನಿಲ್ದಾಣಕ್ಕೆ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳಲ್ಲಿ ಇಬ್ಬರು ನಿಗಮದ ಬಸ್ ಚಾಲಕನ ಮೇಲೆ ಮಚ್ಚಿನಿಂದ ಮತ್ತು ಕೈಯಿಂದ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದಾರೆ.
ಬಿಎಂಟಿಸಿ ಬನಶಂಕರಿ ಘಟಕ – 20ರ ಚಾಲಕ ನಾಗೇಂದ್ರ ಎಂಬುವರೆ ಅಪರಿಚಿತ ವ್ಯಕ್ತಿಗಳಿಂದ ಹಲ್ಲೆಗೊಳಗಾದವರಾಗಿದ್ದಾರೆ. ಇನ್ನು ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಇಂದು (ಏ.5) ಮಧ್ಯಾಹ್ನ ದೂರು ನೀಡಿದ್ದು ಹಲ್ಲೆಕೋರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ದೂರಿನಲ್ಲೇನಿದೆ?: ನಾಗೇಂದ್ರ ಆದ ನಾನು ಸುಮಾರು 30 ವರ್ಷಗಳಿಂದ ಬಿಎಂಟಿಸಿಯಲ್ಲಿ ಚಾಲಕನಾಗಿದ್ದು, ಎಂದಿನಂತೆ ಏ.4ರ ಮಧ್ಯಾಹ್ನ 2ಗಂಟೆಯಿಂದ ಏ.5ರ ಮಧ್ಯಾಹ್ನ 2ಗಂಟೆಯವರೆಗೆ ಮಾರ್ಗ ಸಂಖ್ಯೆ 15E/2ರಲ್ಲಿ ವಾಹನ ಸಂಖ್ಯೆ ಕೆಎ-57- ಎಫ್-2683 ರಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ.
ನನ್ನ ಜತೆ ನಿರ್ವಾಹಕರಾಗಿ ಮಹೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಏ.5ರ ತಡರಾತ್ರಿ 12.30ರ ಸುಮಾರಿಗೆ 15 ಇ ಬಸ್ ನಿಲ್ದಾಣದಲ್ಲಿ ಅಂದಿನ ಕತ್ಯವ ಮುಗಿಸಿ ತಂಗಿದ್ದಾಗ, ಬಸ್ ನಿಲ್ದಾಣದಕ್ಕೆ ಬಂದ 4 ಜನ ಅಪರಿಚಿತರು ನಿಲ್ದಾಣದಲ್ಲಿ ಜೋರಾಗಿ ಕೂಗಾಡುತ್ತಿದ್ದರು. ಆ ವೇಳೆ ನಾನು ಬಸ್‌ನಲ್ಲಿಯೇ ಕುಳಿತುಕೊಂಡು ಅವರಿಗೆ ಇಲ್ಲಿ ಕೂಗಾಡಬೇಡಿ ಹೋಗಿ ಎಂದು ಹೇಳಿದೆ. ಆ ವೇಳೆ ಅವರಲ್ಲಿ ಒಬ್ಬ ಆಸಾಮಿ ನಾವು ಏನಾದರೂ ಮಾಡುತ್ತೇವೆ ನಿನಗೆ ಯಾಕಲೆ ಎಂದು ಅವಾಚ್ಯವಾಗಿ ನಿಂದಿಸಿದ.
ಆಗ ನಾನು ಹಾಗೂ ಮಹೇಶ್ ಅವರು ಬಸ್‌ನಿಂದ ಕೆಳಗಡೆ ಇಳಿದು ಯಾಕಪ್ಪ ಆ ರೀತಿ ಬೈಯುತ್ತೀಯ ಎಂದು ಕೇಳಿದು ಹೋದೆವು. ಆಗ ನಮಗೆ ಬೈಯುತ್ತಿದ್ದ ಆಸಾಮಿಯು ಕೈಗಳಿಂದ ನನ್ನ ಮುಖಕ್ಕೆ ಹಾಗೂ ಕುತ್ತಿಗೆಗೆ ಹೊಡೆದ. ನಂತರ ಆತನ ಪಕ್ಕದಲ್ಲಿದ್ದ ಇನ್ನೊಬ್ಬ ಆಸಾಮಿಯು ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡು ಅವಾಚ್ಯವಾಗಿ ನಿಂದಿಸಿ ಇವನನ್ನು ಸುಮ್ಮನೆ ಬಿಡಬಾರದು ಎಂದು ಬೈಯುತ್ತಾ ಬಂದು ಮಚ್ಚಿನಿಂದ ನನ್ನ ತಲೆಗೆ ಹೊಡೆದ.
ಆಗ ನಾನು ಅದನ್ನು ತಡೆಯಲು ಎಡಗೈಯನ್ನು ಅಡ್ಡ ಇಟ್ಟಾಗ ನನ್ನ ಎಡಗೈನ ಹೆಬ್ಬೆರಳಿಗೆ ಗಾಯವಾಯಿತು. ನಂತರ ಮತ್ತೆ ನನಗೆ ಮಚ್ಚಿನಿಂದ ಹೊಡೆದಾಗ ನನ್ನ ತಲೆಗೆ ಹಾಗೂ ಕಣ್ಣಿನ ಕೆಳಭಾಗದಲ್ಲಿ ತೀವ್ರತರವಾದ ರಕ್ತಗಾಯವಾಗಿದೆ. ಮತ್ತೇ ನನಗೆ ಮಚ್ಚಿನಿಂದ ಹೊಡೆಯಲು ಬಂದಿದ್ದು, ನಾವಿಬ್ಬರು ಅಲ್ಲಿಂದ ಓಡಿ ಹೋದೆವು. ಆ ಗಲಾಟೆಯಲ್ಲಿ ತನ್ನ ಕುತ್ತಿಗೆಯಲ್ಲಿದ್ದ ಸುಮಾರು 16 ಗ್ರಾಂ ಚಿನ್ನದ ಚೈನ್ ಸಹ ಕಳೆದು ಹೋಗಿದೆ.
ನಂತರ ನಾನು ಮಹೇಶ್ ಅವರ ಸಹಾಯದಿಂದ ವಾಸವಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ದೂರು ನೀಡಿದೇನೆ. ಹೀಗಾಗಿ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನನ್ನ ಮೇಲೆ ತೀವ್ರತರವಾದ ಹಲ್ಲೆ ಮಾಡಿರುವ ಈ ಅಪರಿಚಿತರಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಠಾಣೆಯಲ್ಲಿ ಚಾಲಕ ನಾಗೇಂದ್ರ ದೂರು ನೀಡಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಬಿಎಂಟಿಸಿ ಬನಶಂಕರಿ 20ನೇ ಘಟಕದ ವ್ಯವಸ್ಥಾಪಕರು, ಇತರ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳು ಪೊಲೀಸ್ ಠಾಣೆಗೆ ಹೋಗಿ ನಡೆದ ವಿಷಯವನ್ನು ಠಾಣಾಧಿಕಾರಿಗಳಿಗೆ ವಿವರಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ರಾತ್ರಿ ವೇಳೆ ಮಚ್ಚಿನೊಂದಿಗೆ ಬಂದು ಹಲ್ಲೆ ಮಾಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಚಾಲನಾ ಸಿಬ್ಬಂದಿಗಿಲ್ಲ ರಕ್ಷಣೆ: ಇನ್ನು ಬಿಎಂಟಿಸಿ ಬಸ್‌ನಲ್ಲಿ ರಾತ್ರಿಪಾಳಿ ಕೆಲಸ ಮಾಡುವ ಚಾಲನಾ ಸಿಬ್ಬಂದಿಗೆ ಮಲಗುವುದಕ್ಕೆ ಮತ್ತು ವಿಶ್ರಾಂತಿ ಪಡೆಯುವುದಕ್ಕೆ ಹಾಗೂ ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಕರ್ತವ್ಯಕ್ಕೆ ಹೋಗಿವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಆ ಚಾಲನಾ ಸಿಬ್ಬಂದಿಗಳು ಬಸ್‌ನಲ್ಲೇ ಮಲಗಬೇಕಾಗಿದೆ.
ಚಾಲನಾ ಸಿಬ್ಬಂದಿಗೆ ಈ ವೇಳೆ ಯಾವುದೇ ರಕ್ಷಣಾತ್ಮಕ ವ್ಯವಸ್ಥೆ ಇಲ್ಲದಿರುವುದರಿಂದ ಇಂಥ ಕಿಡಿಗೇಡಿಗಳ ಕೃತ್ಯದಿಂದ ಹಲ್ಲೆಗೊಳಗಾಗಿ ನೋವು ಅನುಭವಿಸುವ ಸ್ಥಿತಿ ಎದುರಾಗಿದೆ. ಹೀಗಾಗಿ ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ಮತ್ತು ಮಲಗುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವತ್ತ ತುರ್ತಾಗಿ ಗಮನಹರಿಸಬೇಕು ಎಂದು ನೌಕರರ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.