CrimeNEWSಸಿನಿಪಥ

ಇಕ್ಕಟ್ಟಿನಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಟೀಂ : ಎರಾಗಿದೆ ಬಂಧನ ಭೀತಿ

ವಿಜಯಪಥ ಸಮಗ್ರ ಸುದ್ದಿ

ಮುರಾದಾಬಾದ್‌: ಕಾರ್ಯಕ್ರಮವೊಂದಕ್ಕೆ ಬಾರದೆ ವಂಚನೆ ಎಸಗಿದ ಪ್ರಕರಣದಲ್ಲಿ ಬಾಲಿವುಡ್​ನ (Bollywood) ಜನಪ್ರಿಯ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಮತ್ತು ಅವರ ತಂಡ ಇಕ್ಕಟ್ಟಿಗೆ ಸಿಲುಕಿದೆ.

ಕಾರ್ಯಕ್ರಮಕ್ಕೆ ನಟಿ ಗೈರಾಗಿದ್ದಕ್ಕೆ ಆಯೋಜಕರು ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಸೋನಾಕ್ಷಿ ಸಿನ್ಹಾ ಅವರ ಮ್ಯಾನೇಜರ್ ಸೇರಿದಂತೆ ಅವರದ್ದೇ ತಂಡದ ಆರು ಮಂದಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದ್ದು, ಬಂಧನ ಭೀತಿ ಎದುರಾಗಿದೆ.

ಸೋನಾಕ್ಷಿ ಸಿನ್ಹಾ ಪ್ರಸ್ತುತ ಈ ಪ್ರಕರಣದಿಂದ ತಾತ್ಕಾಲಿಕ ರಿಲೀಫ್ ಪಡೆದುಕೊಂಡಿದ್ದಾರಾದರೂ ವಿಚಾರಣೆ ಮುಂದುವರಿದಂತೆ ಅವರಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಪ್ರಕರಣವೇನು? 2018ರಲ್ಲಿ ನಟಿ ಸೋನಾಕ್ಷಿ ಸಿನ್ಹಾ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೋನಾಕ್ಷಿ ಸಿನ್ಹಾ ಹಣ ಸಹ ಪಡೆದಿದ್ದರು. ಆದರೆ ಆ ಕಾರ್ಯಕ್ರಮಕ್ಕೆ ಅವರು ಗೈರಾದರು. ಇದರಿಂದಾಗಿ ಕಾರ್ಯಕ್ರಮ ಆಯೋಜಿಸಿದವರಿಗೆ ಭಾರಿ ನಷ್ಟವಾಗಿತ್ತು.

ಸೋನಾಕ್ಷಿ ಸಿನ್ಹಾ ಗೈರುಹಾಜರಾದರು ಜತೆಗೆ ಕಾರ್ಯಕ್ರಮಕ್ಕೆ ಹಾಜರಾಗಲು ಪಡೆದ ಹಣವನ್ನು ಸಹ ಹಿಂದಿರುಗಿಸಿರಲಿಲ್ಲ. ಇದರಿಂದಾಗಿ ಕಾರ್ಯಕ್ರಮ ಆಯೋಜಕರು ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸೋನಾಕ್ಷಿಯ ಮ್ಯಾನೇಜರ್​ ಹಾಗೂ ಅವರ ತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಸೋನಾಕ್ಷಿ ಸಿನ್ಹಾ ಪರವಾಗಿ ಅವರ ತಂಡದ ಮಾಳವಿಕ ಪಂಜಾಬಿ, ಧುಮಿಲ್ ಠಕ್ಕರ್, ಎಡ್ಗರ್ ಸಕರಿಯಾ, ಅಭಿಷೇಕ್ ಸಿನ್ಹ ಅವರು ಕಾರ್ಯಕ್ರಮ ಆಯೋಜಕ ಪ್ರಮೋದ್ ಶರ್ಮಾ ಎಂಬುವರಿಂದ ಹಣ ಪಡೆದಿದ್ದರು. 2018ರ ಸೆಪ್ಟೆಂಬರ್ 30ರಂದು ನಡೆದ ಕಾರ್ಯಕ್ರಮಕ್ಕೆ ಸೋನಾಕ್ಷಿ ಸಿನ್ಹಾ ಹಾಜರಾಗಬೇಕಿತ್ತು, ಆದರೆ ಆ ಕಾರ್ಯಕ್ರಮಕ್ಕೆ ಬರಲಿಲ್ಲ. ಇದರಿಂದ ಆಯೋಜಕರಿಗೆ ನಷ್ಟವಾಗಿ ಅವರು ಮುರಾದಾಬಾದ್ ನ್ಯಾಯಾಲಯದಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ತಂಡದ ವಿರುದ್ಧ 2019ರ ಫೆಬ್ರವರಿ ತಿಂಗಳಿನಲ್ಲಿ ವಂಚನೆ ಪ್ರಕರಣ ದಾಖಲಿಸಿದರು.

ಪ್ರಕರಣದ ವಿರುದ್ಧ ಅಲಹಾಬಾದ್ ಹೈಕೋರ್ಟ್ ಮೊರೆ ಹೋದ ನಟಿ ಸೋನಾಕ್ಷಿ ಸಿನ್ಹಾ ಪ್ರಕರಣದಲ್ಲಿ ತಮ್ಮ ವಿರುದ್ಧ ಕಾರ್ಯಾಚರಣೆ ಹಾಗೂ ವಿಚಾರಣೆಗೆ ಸ್ಟೇ ತಂದರು. ಆದರೆ ಅವರ ತಂಡದವರ ವಿರುದ್ಧ ತನಿಖೆ ಜಾರಿಯಲ್ಲಿತ್ತು. ಇದೀಗ ಅವರ ತಂಡದ ಸದಸ್ಯರ ವಿರುದ್ಧ ಜಾಮೀನು ರಹಿತ ವಾರೆಂಟ್ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 28ಕ್ಕೆ ನಡೆಯಲಿದೆ.

ಸೋನಾಕ್ಷಿ ಸಿನ್ಹಾ ಪ್ರಸ್ತುತ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಕಕುಡಾ’, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಹಾಗೂ ‘ನಿಖಿತಾ ರಾಯ್ ಆಂಡ್ ದಿ ಬುಕ್ ಆಫ್ ಡಾರ್ಕ್​ನೆಸ್’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಒಂದು ವೆಬ್ ಸರಣಿಯಲ್ಲಿಯೂ ನಟಿಸುತ್ತಿದ್ದಾರೆ.

Leave a Reply

error: Content is protected !!