ಪಿರಿಯಾಪಟ್ಟಣ: ಮಿದುಳು ನಿಷ್ಕ್ರಿಯಗೊಂಡ ಯುವಕನೊಬ್ಬ ಅಂಗಾಂಗ ದಾನ ಮಾಡುವ ಮೂಲಕ ಹನ್ನೆರಡು ಮಂದಿಗೆ ಮರುಹುಟ್ಟು ನೀಡಿದ್ದು ಯುವ ಮನಸ್ಸುಗಳಲ್ಲಿ ಚಿರಾಯುವಾಗಿ ಉಳಿದಿದ್ದಾನೆ.
ತಾಲೂಕಿನ ಚಿಟ್ಟೇನಹಳ್ಳಿ ಗ್ರಾಮದ ನಿವಾಸಿ ಸುಮತಿ ಎಂಬುವವರ ಪುತ್ರ ಆರ್.ಕೆ ಲೋಹಿತ್ (29) ಅವರು ಸೆ.26ರಂದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಸ್ಥಳೀಯ ಆಸ್ಪತ್ರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಪಡದು ನಂತರ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.
ಆದರೆ ಸೆ.30 ರಂದು ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿ, ಅಂಗಾಂಗ ದಾನದ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾದ ಹಿನ್ನೆಲೆಯಲ್ಲಿ ಸಾವನ್ನಪ್ಪುವ ಮೊದಲು ಕುಟುಂಬ ವರ್ಗದವರು ಅಂಗಾಂಗ ದಾನ ಮಾಡಲು ತೀರ್ಮಾನಿಸಿ 12 ಜನರ ಬದುಕಿಗೆ ಆಶಾಕಿರಣವಾಗಿ ಸಾರ್ಥಕತೆ ಮೆರೆದಿದ್ದಾರೆ.
ಕೆ.ಆರ್.ಲೋಹೀತ್ ಅವರ ಯಕೃತ್ತು, ಮೂತ್ರಪಿಂಡಗಳು, ಹೃದಯ ಕವಾಟ, ಚರ್ಮ ಮತ್ತು ಕಾರ್ನಿಯಾ ಸೇರಿದಂತೆ ಇನ್ನಿತರ ಅಂಗಾಂಗಗಳನ್ನು ದಾನವಾಗಿ ಪಡೆದ ವೈದ್ಯರು, ಚಿಕಿತ್ಸಾಲಯಕ್ಕೆ ನೀಡಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗಳಿಗೆ ಕಸಿ ಮಾಡಲಾವುದಾಗಿ ತಿಳಿಸಿದ್ದಾರೆ ಎಂದು ಸುಮತಿಯವರ ತಂಗಿ ಪಿರಿಯಾಪಟ್ಟಣ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಗಾಯತ್ರಿಯವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.