ಬೆಳಗಾವಿ: ವೇತನ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧದ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಉಪವಾಸವಿದ್ದ ಸಾರಿಗೆಯ ಮಹಿಳಾ ಸಿಬ್ಬಂದಿಗಳಿಬ್ಬರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಬೆನ್ನಲ್ಲೇ ಗುರವಾರ (ಇಂದು) ಮಧ್ಯಾಹ್ನ ಮತ್ತಿಬ್ಬರು ನೌಕರರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ನಾಲ್ಕು ದಿನದಿಂದ ಅನ್ನ ಆಹಾರ ಸೇವಿಸದೆ ಅಸ್ವಸ್ಥಗೊಂಡಿದ್ದ ಉಪವಾಸ ಸತ್ಯಾಗ್ರಹ ನಿರತ ಸಾರಿಗೆ ಸಿಬ್ಬಂದಿ ಬಸವರಾಜು ಅವರು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ. ಅಸ್ವಸ್ಥಗೊಂಡಿದ್ದು ಅವರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ 108 ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ದಾಖಲು ಮಾಡಲಾಗಿದೆ.
ಈಗ ಮತ್ತೊಬ್ಬ ಸಿಬ್ಬಂದಿ ಕೃಷ್ಣ ಗುಡುಗುಡಿಯರು ಕೂಡ ಅಸ್ವಸ್ಥಗೊಂಡಿದ್ದು ಅವರನ್ನು ಕೂಡ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸತ್ಯಾಗ್ರಹ ನಿರತ ಸಾರಿಗೆ ಸಿಬ್ಬಂದಿ ತಿಳಿಸಿದ್ದಾರೆ.
ಒಟ್ಟಾರೆ ಈವರೆಗೆ ನಾಲ್ಕು ಮಂದಿ ಸತ್ಯಾಗ್ರಹ ನಿರತ ಸಿಬ್ಬಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಸತ್ಯಾಗ್ರಹದ ನೇತೃತ್ವ ವಹಿಸಿರುವ ಚಂದ್ರಶೇಖರ್ ಅವರ ಆರೋಗ್ಯದಲ್ಲೂ ಏರುಪೇರಾಗಿದ್ದು ಅವರ ಬಿಪಿ ಲೋ ಆಗುತ್ತಿದೆ. ಸದ್ಯ ಬಿಪಿ ಈಗ 70ರ ಆಸುಪಾಸಿನಲ್ಲಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ಸ್ಥಳದಲ್ಲಿರುವ ವೈದ್ಯರು ಸಲಹೆ ನೀಡಿದ್ದಾರೆ ಎಂದು ಸತ್ಯಾಗ್ರಹ ನಿರತರು ತಿಳಿಸಿದ್ದಾರೆ.
ಇನ್ನು ಈಗಾಗಲೇ ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ನೌಕರರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೈಬಿಪಿಯಿಂದ ಅವರು ಸ್ಥಳದಲ್ಲಿ ಕುಸಿದು ಬಿದ್ದಿದ್ದರಿಂದ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಡಿ.19ರಿಂದ ಅಂದರೆ ಸುಮಾರು 96 ಗಂಟೆಗಳ ಕಾಲ ಏನೊಂದು ಆಹಾರವನ್ನು ಸೇವಿಸದೆ ಉಪವಾಸ ಕುಳಿತಿರುವುದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಆದರೂ ನಾವು ನಮ್ಮ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ.
ಅಲ್ಲದೆ ಎಮ್ಮೆ ಚರ್ಮದ ಸರ್ಕಾರ ಸಾರಿಗೆ ನೌಕರರ ಕೂಗನ್ನು ಕೇಳಿಸಿಕೊಳ್ಳುತ್ತಿಲ್ಲ. ಇಂಥ ನೌಕರರ ವಿರೋಧಿ, ಜನವಿರೋಧಿ ಸರ್ಕಾವನ್ನು ನಾವು ನೋಡೆ ಇಲ್ಲ ಎಂದು ಅಸ್ವಸ್ಥಗೊಂಡ ನೌಕರರನ್ನು ನೋಡಲು ಬಂದ ಸಾರ್ವಜನಿಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ನಾವು ಪ್ರಾಣ ಹೋದರೂ ಸ್ಥಳದಿಂದ ಕದಲುವುದಿಲ್ಲ ಎಂದು ಸತ್ಯಾಗ್ರಹ ನಿರತ ಸಾರಿಗೆ ನೌಕರರು ಪಟ್ಟು ಹಿಡಿದಿದ್ದು, ಪ್ರಾಣದ ಹಂಗುತೊರೆದು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)