ಬೆಂಗಳೂರು: ರಾಜ್ಯದ ಜನರಿಗೆ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದು, ಸದ್ಯ 5 ಕೆಜಿ ಅಕ್ಕಿ ಜತೆಗೆ ಉಳಿದ 5 ಅಕ್ಕಿಗೆ ಹಣ ಕೊಡ್ತೀವಿ ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನ ತೆಗೆದುಕೊಡಿದ್ದು, ಎಲ್ಲಿವರೆಗೂ ಅಕ್ಕಿ ಸಿಗಲ್ಲವೋ ಅಲ್ಲಿವರೆಗೂ ಹಣ ಕೊಡಲು ಕ್ಯಾಬೆನೆಟ್ನಲ್ಲಿ ತೀರ್ಮಾನಿಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಆಂಧ್ರಪ್ರದೇಶ, ತೆಲಂಗಾಣದಲ್ಲಿ ರೇಟ್ ಜಾಸ್ತಿ ಇದೆ. ನಾವು FCI ಕೊಡೋ ರೇಟ್ ಕೇಳ್ತಾ ಇದ್ದೇವೆ. ಆ ದರಕ್ಕೆ ಅವರು ಕೊಡ್ತಿಲ್ಲ. ನಮ್ಮ ದರಕ್ಕೆ ಅಕ್ಕಿ ಸಿಗ್ತಾ ಇಲ್ಲ, ಅಕ್ಕಿ ಸಿಕ್ಕ ತಕ್ಷಣ 10 ಕೆಜಿ ಅಕ್ಕಿಯನ್ನೇ ಕೊಡುತ್ತೇವೆ. ಹೀಗಾಗಿ ಅಕ್ಕಿ ಬದಲು ಹಣ ಕೊಡಲು ಮತ್ತೊಮ್ಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ಇನ್ನು, ಸಚಿವ ಸಂಪುಟ ಸಭೆಯಲ್ಲಿ ಕಾವೇರಿ, ಮೇಕೆದಾಟು ಪಾದಯಾತ್ರೆ ಸೇರಿದಂತೆ ನಾಡಿನ ಹಿತರಕ್ಷಣೆಯ ಹೋರಾಟಗಳಲ್ಲಿ ಭಾಗವಹಿಸಿದ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ ಅವರು ಮಾಡಿದ್ದ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.
ಪ್ರಕರಣಗಳನ್ನು ಹಿಂಪಡೆಯುವ ವಿಚಾರವಾಗಿ ಸಚಿವ ಸಂಪುಟ ಉಪ ಸಮಿತಿಯ ಮುಂದೆ ಕಡತ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕ್ಯಾಬಿನೆಟ್ ಮುಂದೆ ತರಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದರು.